ಕಂಪ್ಲಿ: ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ವಸತಿ ನಿಲಯದಲ್ಲಿ ಕೊರೆವ ಚಳಿಯಲ್ಲೂ ವಿದ್ಯಾರ್ಥಿಗಳಿಗೆ ಬಿಸಿ ನೀರು ಇಲ್ಲದಿರುವುದು ಶನಿವಾರ ತಾಲೂಕು ನೋಡಲ್ ಅಧಿಕಾರಿ ಸಿದ್ಧರಾಮೇಶ್ವರ ಭೇಟಿ ನೀಡಿದ ವೇಳೆ ಬಹಿರಂಗಗೊಂಡಿತು.
ಇದನ್ನೂ ಓದಿ: English ಬರುವುದಿಲ್ಲ, ಅರ್ಥವಾಗುತ್ತಿಲ್ಲ..ವಿದ್ಯಾರ್ಥಿನಿಯ ಪ್ರಾಣ ತೆಗೆದ ಇಂಗ್ಲಿಷ್!
ಬಾಲಕಿಯರ ನಿಲಯದ ವಿದ್ಯಾರ್ಥಿನಿಯರಾದ ಹುಲಿಗೆಮ್ಮ, ನಾಗರತ್ನ, ಬಿಂದು, ಶಕುಂತಲಾ ಮಾತನಾಡಿ, ಈ ಹಾಸ್ಟೆಲ್ ಹಿಂದೆ ಕರೊನಾ ಕೇಂದ್ರವಾಗಿದ್ದರಿಂದ ಹಾಸಿಗೆ ತೆರವುಗೊಳಿಸಿದ್ದು, ಹೊಸದಾಗಿ ಹಾಸಿಗೆ, ಹೊದಿಕೆ, ಮಂಚ ನೀಡಿಲ್ಲ.
ಸಮವಸ್ತ್ರ, ಪರಿಷ್ಕೃತ ಪಠ್ಯಪುಸ್ತಕ, ಸ್ಪರ್ಧಾತ್ಮಕ ಪುಸ್ತಕಗಳೂ ಇಲ್ಲ. ಬಿಸಿ ನೀರಿಗಾಗಿ ಸೋಲಾರ್ ಹೀಟರ್ ದುರಸ್ತಿಗೊಳಿಸಬೇಕು ಎಂದು ಮನವಿ ಮಾಡಿದರು. ಆಗ ನೋಡಲ್ ಅಧಿಕಾರಿ ಕೂಡಲೇ ಸೋಲಾರ್ ದುರಸ್ತಿಗೊಳಿಸುವಂತೆ ವಾರ್ಡನ್ ಕಾಳಮ್ಮಗೆ ಸೂಚಿಸಿದರು.
ನಂತರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪುರಸಭೆ ಮುಖ್ಯಾಧಿಕಾರಿಗೆ ಕರೆ ಮಾಡಿ, ಪುರಸಭೆ ನಿಧಿಯಲ್ಲಿ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸಿ ಕೊಡುವಂತೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಕೂಡಲೇ ಸೋಲಾರ್ ದುರಸ್ತಿಗೊಳಿಸುವಂತೆ ಸಿದ್ಧರಾಮೇಶ್ವರ ತಿಳಿಸಿದರು.
ನಂತರ ರಾಮಸಾಗರ, ಎಮ್ಮಿಗನೂರು ವಸತಿ ನಿಲಯಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ನಿಲಯ ಪಾಲಕ ಕೆ.ವಿರೂಪಾಕ್ಷಿ, ಎಫ್‌ಡಿಎ ಅಜಿತ್ ಇದ್ದರು.