ಹಾಸ್ಟೆಲ್​ಗೆ ಶಾಸಕಿ ರೂಪಾಲಿ ಭೇಟಿ

ಕಾರವಾರ: ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ಪಕ್ಕದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ ಕಟ್ಟಡ ನಿರ್ವಣವಾಗಿ ಮೂರು ವರ್ಷವಾದರೂ ವಿದ್ಯಾರ್ಥಿಗಳ ಬಳಕೆಗೆ ಸಿಗದ ಬಗೆಗೆ ಶಾಸಕಿ ರೂಪಾಲಿ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.

ಹಾಸ್ಟೇಲ್​ಗೆ ಭಾನುವಾರ ಹಠಾತ್ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಪರಿಸ್ಥಿತಿ ನೋಡಿ ದಂಗಾದರು. ಅಲ್ಲದೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಒಂದು ಕಟ್ಟಡದಲ್ಲಿ 400 ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್​ನ ಶೌಚಗೃಹದ ತ್ಯಾಜ್ಯ ತುಂಬಿ ತುಳುಕುತ್ತಿದೆ. ಇದರಿಂದ ಸುತ್ತಲಿನ ಪ್ರದೇಶಗಳಿಗೂ ವಾಸನೆ ಹರಡುತ್ತಿದೆ. ಇನ್ನೊಂದೆಡೆ ಡಿ.ದೇವರಾಜ ಅರಸು ವೃತ್ತಿಪರ ಹಾಗೂ ವಿಭಜನೆ ವಸತಿ ನಿಲಯ ಕಟ್ಟಿ ಮೂರು ವರ್ಷಗಳೇ ಕಳೆದಿವೆ. 2017ರ ಡಿಸೆಂಬರ್ 6ರಂದು ಆಗಿನ ಸಿಎಂ ಸಿದ್ದರಾಮಯ್ಯ ಕಾರವಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಾಸ್ಟೆಲ್ ಉದ್ಘಾಟನೆಯೂ ಆಗಿದೆ. ಆದರೆ, ಹಾಸ್ಟೆಲ್​ನ ಶೌಚಗೃಹದ ನೀರು ಹರಿದು ಹೋಗಲು ವ್ಯವಸ್ಥೆ ಮಾಡದ ಕಾರಣ ಅದನ್ನು ಬಳಕೆ ಮಾಡದೇ ಹಾಗೇ ಬಿಡಲಾಗಿದೆ ಎಂದು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು.

ತಕ್ಷಣ ತೆರೆಯಲು ಕ್ರಮ ವಹಿಸಿ: ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕಿ ರೂಪಾಲಿ ನಾಯ್ಕ, ಗಣಕಯಂತ್ರಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡುತ್ತಿಲ್ಲ. ಟಿವಿ ಕೆಟ್ಟು ತುಂಬಾ ದಿನಗಳಾಗಿವೆ. ಇಂಥ ಸಣ್ಣ ಕೆಲಸಗಳೂ ಆಗುತ್ತಿಲ್ಲ ಎಂದರೆ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹಾಸ್ಟೆಲ್​ಗೆ ಶೌಚಗೃಹ ನಿರ್ಮಾಣ ಮಾಡಿ ತಕ್ಷಣ ಅದನ್ನು ತೆರೆಯಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಯಾರೋ ಫೋನ್ ಮಾಡಿ ಇಲ್ಲಿಗೆ ಒಮ್ಮೆ ಭೇಟಿ ನೀಡುವಂತೆ ಹೇಳಿದರು. ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಕಂಡು ಬೇಸರವಾಗಿದೆ. ದೂರದ ಊರುಗಳಿಂದ ಕಲಿಯಲು ಬರುವ ಇಲ್ಲಿನ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಶೌಚಕ್ಕೆ ವ್ಯವಸ್ಥೆಯೇ ಇಲ್ಲದ ಕಟ್ಟಡವನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದ್ದು ಅಚ್ಚರಿ ತಂದಿದೆ.  ಶೌಚದ ನೀರು ಹೋಗುವ ವ್ಯವಸ್ಥೆಯನ್ನೇ ಮಾಡದೇ ಕಟ್ಟಡ ನಿರ್ವಿುಸಿದವರು ಯಾರು ಎಂದು ತನಿಖೆ ಕೈಗೊಳ್ಳಬೇಕು. —-ರೂಪಾಲಿ ನಾಯ್ಕ, ಶಾಸಕಿ, ಕಾರವಾರ, ಅಂಕೋಲಾ ಕ್ಷೇತ್ರ