ವಿದ್ಯಾರ್ಥಿ, ಕಾರ್ವಿುಕರಿಗಾಗಿ ಆಸ್ಪತ್ರೆ ಲೋಕಾರ್ಪಣೆ

ಬಾಗಲಕೋಟೆ: ಶಾಲೆ ಮಕ್ಕಳು ಹಾಗೂ ಸಕ್ಕರೆ ಕಾರ್ಖಾನೆ ಉದ್ಯೋಗಿ ಗಳ ಆರೋಗ್ಯ ಸುರಕ್ಷತೆಗಾಗಿ ಮಂಗಳವಾರ ಆಸ್ಪತ್ರೆಯೊಂದನ್ನು ಆರಂಭಿಸುವ ಮೂಲಕ ವಿಧಾನ ಪರಿಷತ್ ಸದಸ್ಯ, ಶಿಕ್ಷಣ ಪ್ರೇಮಿ ಎಸ್.ಆರ್. ಪಾಟೀಲರು 70ನೇ ಜನ್ಮದಿನವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡರು.

ರಾಜಕೀಯವಾಗಿ ಸಾಕಷ್ಟು ಹುದ್ದೆಗಳನ್ನು ಅಲಂಕರಿಸಿದ್ದರೂ ಸ್ವಗ್ರಾಮದ ಮೇಲೆ ಎಸ್.ಆರ್. ಪಾಟೀಲ ಪ್ರೇಮ ಮೆರೆಯುತ್ತ ಬಂದಿದ್ದಾರೆ. ಪುಟ್ಟ ಗ್ರಾಮ ಬಾಡಗಂಡಿಯಲ್ಲಿ ಬಾಪೂಜಿ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಸ್ಥಾಪಿಸಿದ್ದು, ಇದೀಗ ಶಾಲೆ ಆವರಣದಲ್ಲಿ ಶಾಂತಿ ಆಸ್ಪತ್ರೆ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ಅನುಕೂಲ ಕಲ್ಪಿಸಿದ್ದಾರೆ.

ಸಿಬಿಎಸ್​ಇ ಶಾಲೆಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ಹಾಗೂ ಬೀಳಗಿ ಶುಗರ್ಸ್ ಕಾರ್ವಿುಕರು, ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಕುಟುಂಬಕ್ಕೆ ಈ ಆಸ್ಪತ್ರೆ ಉಚಿತ ಸೇವೆ ಒದಗಿಸಲಿದೆ.

ಐಸಿಯು ಘಟಕ, 10 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಗೆ ಡಾ. ವೆಂಕಟೇಶ ನಾಗನೂರ ಹಾಗೂ ಡಾ. ರಾಜಲಕ್ಷ್ಮೀ ಕೊಕರೆ ವೈದ್ಯರಾಗಿ ನೇಮಕಗೊಂಡಿದ್ದಾರೆ. ಇಬ್ಬರು ಆಯಾಗಳು ಉಸ್ತುವಾರಿ ವಹಿಸುವರು. ಆಸ್ಪತ್ರೆ ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ.

ಜನ್ಮದಿನದ ಸಮಾರಂಭಕ್ಕಾಗಿ ಕಟೌಟ್, ಫ್ಲೆಕ್ಸ್ ಬೋರ್ಡ್​ಗಳಿಗೆ ಅವಕಾಶ ನೀಡದೆ ಸರಳ ರೀತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಹಿರಿಯ ವೈದ್ಯರಾದ ಬಿ.ಎಚ್. ಕೆರೂಡಿ, ಡಾ. ಅಶೋಕ ಸೊನ್ನದ, ಡಾ. ಸುಭಾಷ ಪಾಟೀಲ, ಡಾ.ಬಿ.ಕೆ. ಭಾವಿ ಆಸ್ಪತ್ರೆಯನ್ನು ಉದ್ಘಾಟಿಸಿದರು.

ಮಾಜಿ ಶಾಸಕ ಜೆ.ಟಿ.ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ಸತ್ಯಪ್ಪ ಮೇಲ್ನಾಡ, ಬಿ.ಎನ್. ಹಳ್ಳೂರ, ನಿಂಗಣ್ಣ ಹೂಗಾರ, ಶಿವಾನಂದ ನಿಂಗನೂರ, ಸಾಹಿತಿ ಡಾ. ಸತ್ಯಾನಂದ ಪಾತ್ರೋಟ, ಸಂಸ್ಥೆ ಆಡಳಿತಾಧಿಕಾರಿ ಎಚ್.ಬಿ. ಧರ್ಮಣ್ಣವರ, ಎಸ್.ಎಸ್. ಹಳ್ಳೂರ, ಎಲ್.ಬಿ. ಕುರ್ತಕೋಟಿ, ಡಾ. ವೆಂಕನಗೌಡ ನಾಗನೂರ ಸೇರಿದಂತೆ ಮತ್ತಿತರರಿದ್ದರು.