ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷೃ ಕೈಯೊಳಗೆ ಉಳಿದ ಬಳೆ ಚೂರು

ಗಂಗೊಳ್ಳಿ: ಕೆಲಸ ಮಾಡುವಾಗ ಬಿದ್ದು ಕೈಗೆ ಗಂಭೀರ ಗಾಯಗೊಂಡಿದ್ದ ಕಂಚುಗೋಡು ನಿವಾಸಿ ಚಿಕ್ಕು ಪೂಜಾರ‌್ತಿ(45) ಅವರ ಕೈಯೊಳಗಿದ್ದ ಬಳೆ ಚೂರನ್ನು ಗಮನಿಸದೆ ಹೊಲಿಗೆ ಹಾಕಿದ ಕುಂದಾಪುರದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷೃದಿಂದ ಗಾಯ ಉಲ್ಭಣವಾಗಿದ್ದು, ಮನೆಯವರು ಸಕಾಲಿಕ ಚಿಕಿತ್ಸೆ ಕೊಡಿಸಿದ್ದರಿಂದ ಚೇತರಿಸಿಕೊಂಡಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ಚಿಕ್ಕು ಪೂಜಾರ‌್ತಿ ಶನಿವಾರ ಜಾರಿ ಬಿದ್ದ ಪರಿಣಾಮ ಎಡಕೈಗೆ ಗಂಭೀರ ಗಾಯವಾಗಿತ್ತು. ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿ ಗಾಯಗೊಂಡ ಕೈ ಸ್ವಚ್ಛಗೊಳಿಸಿ ಹೊಲಿಗೆ ಹಾಕಿದ್ದರು. ಸೋಮವಾರ ಪುನಃ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು. ಶನಿವಾರದ ಕೈ ಮತ್ತಷ್ಟು ಬೀಗತೊಡಗಿದ್ದು, ನೋವು ಮತ್ತಷ್ಟು ಉಲ್ಭಣವಾಗುತ್ತಿತ್ತು. ಆಸ್ಪತ್ರೆ ಸಿಬ್ಬಂದಿ ತಿಳಿಸಿದಂತೆ ಸೋಮವಾರ ಆಸ್ಪತ್ರೆಗೆ ಹೋದಾಗ ವೈದ್ಯರು ಇರಲಿಲ್ಲ. ಮನೆಗೆ ಬಂದ ಚಿಕ್ಕು ಪೂಜಾರ‌್ತಿ ನೋವು ತಾಳಲಾರದೆ ಬುಧವಾರ ಗಂಗೊಳ್ಳಿಯ ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸೂಚನೆ ಮೇರೆಗೆ ಗುರುವಾರ ಕುಂದಾಪುರದ ಖಾಸಗಿ ಆಸ್ಪತ್ರೆಗೆ ತೆರಳಿದರು.

ಚಿಕ್ಕು ಪೂಜಾರ‌್ತಿಯನ್ನು ಪರೀಕ್ಷಿಸಿದ ಕುಂದಾಪುರ ಖಾಸಗಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರು ಸಂಶಯಗೊಂಡು ಎಕ್ಸ್‌ರೇ ತೆಗೆಸುವಂತೆ ಸೂಚಿಸಿದರು. ಎಕ್ಸ್‌ರೇ ವರದಿಯಲ್ಲಿ ಗಾಯಗೊಂಡ ಕೈಯೊಳಗೆ ಮೂರು ಬಳೆ ಚೂರುಗಳಿರುವುದು ಪತ್ತೆಯಾಯಿತು. ತಕ್ಷಣ ಸಣ್ಣ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮೂರು ಬಳೆ ಚೂರುಗಳನ್ನು ಹೊರ ತೆಗೆದಿದ್ದಾರೆ.