ಗೂಳಿಹಟ್ಟಿ ಶೇಖರ್ ಶಿವಮೊಗ್ಗ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಮರಳು ವಿತರಣೆಯಲ್ಲಿ ಪೊಲೀಸ್ ಇಲಾಖೆಯ ತಾರತಮ್ಯ ನೀತಿ ಖಂಡಿಸಿ ಹೊಸದುರ್ಗ ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ನಗರದ ಶಂಕರ ಕಣ್ಣಿನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಕಣ್ಣಿನ ಸೋಂಕು ಉಂಟಾಗಿದ್ದು, ದೃಷ್ಟಿಗೆ ತೊಂದರೆ ಇಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಸ್ಥಿತಿ ನೋಡಿಕೊಂಡು ಆಸ್ಪತ್ರೆಯಿಂದ ಯಾವಾಗ ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ನೇತ್ರ ತಜ್ಞ ಡಾ. ಮಹೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಭಾನುವಾರ ಸಂಜೆ ಪೊಲೀಸ್ ಇಲಾಖೆ ಎದುರು ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುವ ವೇಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದರು. ಈ ವೇಳೆ ಕಣ್ಣಿಗೆ ಪೆಟ್ರೋಲ್ ಬಿದ್ದು ತೊಂದರೆಗೊಳಗಾಗಿದ್ದರಿಂದ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ತಡರಾತ್ರಿಯೇ ಶಿವಮೊಗ್ಗ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು.

ಸೋಮವಾರ ಬೆಳಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ ಪ್ರತ್ಯೇಕವಾಗಿ ಭೇಟಿ ಯಾಗಿ ಆರೋಗ್ಯ ವಿಚಾರಿಸಿದರು. ಗೂಳಿಹಟ್ಟಿ ಶೇಖರ್ ವರ್ತನೆಗೆ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಹೋರಾಟ ಮಾಡಲು ಹಲವು ಮಾರ್ಗಗಳಿವೆ. ಇನ್ನು ಮುಂದೆ ಇಂತಹ ಹುಚ್ಚಾಟ ಮಾಡಬೇಡಿ ಎಂದು ಸಲಹೆ ನೀಡಿದರು ಎಂದು ಗೊತ್ತಾಗಿದೆ. ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ ಮತ್ತಿತರರಿದ್ದರು.

ಪೊಲೀಸರ ಪ್ರಚೋದನೆ ಕಾರಣ: ಆತ್ಮಹತ್ಯೆ ಯತ್ನಕ್ಕೆ ಪೊಲೀಸರ ಪ್ರಚೋದನೆಯೇ ಕಾರಣ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಸೋಮವಾರ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರೇಳು ತಿಂಗಳಿಂದ ಮರಳಿನ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದ್ದು, ಜನಸಾಮಾನ್ಯರಿಗೆ ಮರಳು ಸಿಗುತ್ತಿಲ್ಲ. ಆಶ್ರಯ ಮನೆ ನಿರ್ವಣ, ಉದ್ಯೋಗ ಖಾತ್ರಿ ಯೋಜನೆಗಳಿಗೆ ಮರಳು ದೊರೆತಿಲ್ಲ ಎಂದು ದೂರಿದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಸುಲಭವಾಗಿ ಮರಳು ಸಿಗುತ್ತಿದೆ. ಒಂದೆರಡು ಕೇಸ್ ದಾಖಲಿಸಿದರೂ ತಕ್ಷಣವೇ ಜಾಮೀನು ಸಿಗುವಂತೆ ಮಾಡುತ್ತಿದ್ದಾರೆ. 100ರಿಂದ 150 ಟಿಪ್ಪರ್ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರೂ ಕ್ರಮ ಕೈಗೊಳ್ಳದ ಪೊಲೀಸರು, ಬಡವರ ಮೇಲೆ ದರ್ಪ ತೋರುತ್ತಿದ್ದಾರೆ. ಏನುಬೇಕಾದರೂ ಮಾಡಿಕೊಳ್ಳಿ ಎಂದು ಪ್ರಚೋದನೆ ನೀಡಿದ ಕಾರಣ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದರು.

ತಾಲೂಕಿನಲ್ಲಿ ಟ್ರ್ಯಾಕ್ಟರ್ ಇಟ್ಟುಕೊಂಡವರ ಮೇಲೆ ಮರಳು ಪರವಾನಗಿ ಇದ್ದರೂ ಅನವಶ್ಯಕವಾಗಿ ಕೇಸ್ ದಾಖಲು ಮಾಡಲಾಗುತ್ತಿದೆ. ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

9ರಂದು ಬೆಂಗಳೂರಲ್ಲಿ ಸಭೆ: ಅಕ್ರಮ ಮರಳುಗಾರಿಕೆ ಬಗ್ಗೆ ರ್ಚಚಿಸಿ ಹೋರಾಟ ರೂಪಿಸಲು ಜ.9ರಂದು ಬೆಂಗಳೂರಿನಲ್ಲಿ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರ ಸಭೆ ನಡೆಯಲಿದೆ. ಸಭೆಯಲ್ಲಿ ಮರಳಿನ ಹೋರಾಟದ ಕುರಿತು ಸಮಗ್ರವಾಗಿ ರ್ಚಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಅಕ್ರಮ ಮರಳುಗಾರಿಕೆ ತಡೆಗೆ ರಾಜ್ಯ ಸರ್ಕಾರ ವಿಫಲವಾಗಿದ್ದು, ಅಕ್ರಮ ಮರಳುಗಾರಿಕೆ ಸಿಎಂ ಕುಮಾರಸ್ವಾಮಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಅಕ್ರಮದಲ್ಲಿ ಸಿಎಂ ಹಾಗೂ ಸಚಿವರಿಗೆ ಪಾಲು ಇದೆಯೇ? ಎಂಬ ಶಂಕೆ ವ್ಯಕ್ತವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಜನಸಾಮಾನ್ಯರಿಗೆ ಮರಳು ಸಿಗಲಿ ಎಂದು ಹೋರಾಟ ಮಾಡುವವರ ಮೇಲೆ ಕೇಸ್ ಹಾಕಲಾಗುತ್ತಿದೆ. ಮರಳು ಲೂಟಿ ಮಾಡುವವರನ್ನು ಬಿಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅಕ್ರಮ ಮರಳುಗಾರಿಕೆ ಸರ್ಕಾರ ಹಾಗೂ ಮಂತ್ರಿಗಳ ಆದಾಯದ ಮೂಲವಾಗಿದೆ. ಒಬ್ಬ ಶಾಸಕ ಮರಳಿಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಡವರು ಆಶ್ರಯ ಮನೆ ಕಟ್ಟಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಎಸ್​ವೈ ಸಿಡಿಮಿಡಿ: ಪೆಟ್ರೋಲ್ ಸುರಿದುಕೊಂಡ ಶಾಸಕ ಗೂಳಿಹಟ್ಟಿ ಶೇಖರ್ ವರ್ತನೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ನ್ಯಾಯಕ್ಕಾಗಿ ಹೋರಾಟ ಮಾಡಲು ಹಲವು ಮಾರ್ಗಗಳಿವೆ. ಆದರೆ ಇಂತಹ ಹುಚ್ಚಾಟ ಮಾಡುವುದು ಸರಿಯಲ್ಲ. ಆಗದವರು ಬೆಂಕಿ ಹಚ್ಚಿದ್ದರೆ ಏನಾಗುತ್ತಿತ್ತು ಎಂಬುದರ ಅರಿವಿದೆಯಾ? ಎಂದು ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ. ಪೆಟ್ರೋಲ್ ಅಥವಾ ಸೀಮೆಎಣ್ಣೆ ಸುರಿದುಕೊಂಡು ಸರ್ಕಾರವನ್ನು ಎಚ್ಚರಿಸಬೇಕು ಎಂದೇನಿಲ್ಲ. ಸರ್ಕಾರದ ಗಮನ ಸೆಳೆಯಲು ಸಾಕಷ್ಟು ಮಾರ್ಗಗಳಿವೆ. ಅದನ್ನು ಬಿಟ್ಟು ಆತ್ಮಹತ್ಯೆಗೆ ಯತ್ನಿಸುವುದು ಸರಿಯಲ್ಲ. ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಎಂದು ಕಿಡಿಕಾರಿದರು ಎಂದು ಗೊತ್ತಾಗಿದೆ.