ಹೊಸಪೇಟೆ ರಸ್ತೆ ಹಳೇ ಸಮಸ್ಯೆ

< ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳ ನಿರ್ಲಕ್ಷೃ>

ರಾಘವೇಂದ್ರ ಪೈ ಗಂಗೊಳ್ಳಿ

ತ್ರಾಸಿ ಗ್ರಾಪಂ ವ್ಯಾಪ್ತಿಯ ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಕಷ್ಟಕರವಾಗುತ್ತಿದೆ.

ಕಂಚುಗೋಡು ಮತ್ತು ಗುಜ್ಞಾಡಿ ಗ್ರಾಮಗಳನ್ನು ಬೆಸೆಯುವ ಪ್ರಮುಖ ರಸ್ತೆಯಾಗಿದೆ ಅಲ್ಲದೆ ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆಗೆ ಪರ್ಯಾಯ ರಸ್ತೆ ಕೂಡ ಆಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಸಂಪರ್ಕ ರಸ್ತೆಯು ಹಲವು ದಶಕಗಳಿಂದ ದುರಸ್ತಿಕಂಡಿಲ್ಲ. ಹೀಗಾಗಿ ಆಟೋ ರಿಕ್ಷಾ ಮೊದಲಾದ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿವೆ.

ಸುತ್ತಮುತ್ತಲಿನ ಪ್ರದೇಶದ ಹಲವು ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ಹೊಸಪೇಟೆ-ಕಂಚುಗೋಡು ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತಾಳಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಈ ಮಾರ್ಗದಲ್ಲಿ ನೂರಕ್ಕೂ ಅಧಿಕ ಮನೆಗಳಿದ್ದು ಹೊಸಪೇಟೆ, ಕಂಚುಗೋಡು ಮೊದಲಾದ ಪ್ರದೇಶಗಳಲ್ಲಿ ಹಿಂದುಳಿದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಮೀನುಗಾರಿಕೆ ಹಾಗೂ ಇನ್ನಿತರ ಕೂಲಿ ಕೆಲಸ ಮಾಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಪರಿಸರದ ಜನರು ತ್ರಾಸಿ, ಗುಜ್ಜಾಡಿ ಹಾಗೂ ಗಂಗೊಳ್ಳಿಗೆ ಬರಲು ಇದೇ ರಸ್ತೆ ಅವಲಂಬಿಸಿದ್ದಾರೆ.

ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿಪಡಿಸುವುದರಿಂದ ರಸ್ತೆಯ ತುಂಬಾ ಹೊಂಡ ಗುಂಡಿಗಳು ನಿರ್ಮಾಣಗೊಂಡಿವೆ. ಕಳೆದ 10 ವರ್ಷಗಳ ಹಿಂದೆ ರಸ್ತೆಯ ಸ್ವಲ್ಪ ಭಾಗ ಡಾಂಬರಾಗಿರುವುದು ಬಿಟ್ಟರೆ ಈವರೆಗೆ ಸಂಪೂರ್ಣ ನವೀಕರಣಗೊಂಡಿಲ್ಲ. ಆದರೂ ಜನಪ್ರತಿನಿಧಿಗಳು ಇತ್ತ ಕಣ್ಣೆತ್ತಿಯೂ ನೋಡಿಲ್ಲ. ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಗಳು ಹುಸಿಯಾಗುತ್ತಿದೆ. ಓಟಿಗಾಗಿ ಈ ರಸ್ತೆಯನ್ನು ಬಳಸಿಕೊಳ್ಳುವ ರಾಜಕೀಯ ನಾಯಕರು ಚುನಾವಣೆ ಬಳಿಕ ಈ ವಿಚಾರವನ್ನು ಮರೆತು ಬಿಡುತ್ತಿದ್ದಾರೆ. ಈ ಭಾಗದ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲ ಎಂಬಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಪ್ರಮುಖ ಸಂಪರ್ಕ ರಸ್ತೆ ಅವ್ಯವಸ್ಥೆಯ ಗೂಡಾಗಿ ಪರಿಣಮಿಸಿದೆ. ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಆದಷ್ಟು ಶೀಘ್ರ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹೊಸಪೇಟೆ-ಕಂಚುಗೋಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಸಂಚರಿಸುವುದು ತ್ರಾಸದಾಯಕವಾಗಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆಗೆ ಈವರೆಗೆ ಸ್ಪಂದನೆ ದೊರೆತಿಲ್ಲ. ಜನಪ್ರತಿನಿಧಿಗಳು ಆಶ್ವಾಸನೆ ನೀಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಣ್ಗೆರೆ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಪ್ರದೀಪ ಖಾರ್ವಿ, ಗ್ರಾಮಸ್ಥರು, ಹೊಸಪೇಟೆ

ಸುತ್ತಮುತ್ತಲಿನ ಪ್ರದೇಶದ ಹಲವು ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ಹೊಸಪೇಟೆ-ಕಂಚುಗೋಡು ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತಾಳಲಾಗುತ್ತಿದೆ. ರಸ್ತೆಯಲ್ಲಿ ದ್ವಿಚಕ್ರ ಸಹಿತ ಇತರ ವಾಹನಗಳು ಸಂಚರಿಸಲು ಕಷ್ಟವಾಗುತ್ತಿದ್ದು, ಆಟೋ ರಿಕ್ಷಾ ಮೊದಲಾದವುಗಳು ಈ ರಸ್ತೆಯ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿವೆ. ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು.
ಸದಾಶಿವ, ಕಂಚುಗೋಡು ನಿವಾಸಿ