ಹೊಸಪೇಟೆ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಫೆ.5ರಿಂದ 9ವರಗೆ ಬೆಳಗ್ಗೆ 5 ರಿಂದ 7.30ರವರೆಗೆ ಯೋಗ ಗುರು ಬಾಬಾ ರಾಮದೇವ ನೇತೃತ್ವದಲ್ಲಿ ಬೃಹತ್ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿ ಉತ್ತರ ಕರ್ನಾಟಕ ಪ್ರಾಂತ ಮಹಿಳಾ ಉಪಪ್ರಭಾರಿ ದಾಕ್ಷಾಯಿಣಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ಥಳೀಯ ಎಂಎಸ್‌ಪಿಎಲ್ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. 20 ಸಾವಿರ ಯೋಗಸಾಧಕರು ಮತ್ತು ಆಸಕ್ತರು ಭಾಗವಹಿಸಲಿದ್ದಾರೆ. ಈಗಾಗಲೇ 101 ಶಿಬಿರಗಳನ್ನು ನಡೆಸಲಾಗಿದೆ. ಬೃಹತ್ ಯೋಗ ಶಿಬಿರಕ್ಕೆ ಕ್ರೀಡಾಂಗಣದಲ್ಲಿ ಸಿದ್ಧತಾ ಕಾರ್ಯ ನಡೆದಿದೆ. ಫೆ.5 ರಿಂದ 9ರವರೆಗೆ ಪ್ರತಿದಿನ ಬೆಳಗ್ಗೆ 5ಕ್ಕೆ ಯೋಗ ಶಿಬಿರ ಆರಂಭವಾಗಲಿದೆ. ಆಸಕ್ತರು 15 ನಿಮಿಷ ಮೊದಲೇ ಹಾಜರಾಗಬೇಕು. ಫೆ.7ರಂದು ಸಂಜೆ 4 ರಿಂದ 6ಗಂಟೆವರೆಗೆ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಶಿಬಿರ ಆಯೋಜಿಸಲಾಗಿದೆ. ಯೋಗ ಜಾಗೃತಿಗಾಗಿ ಜ.31ರಂದು ಸಂಜೆ 5.30ಕ್ಕೆ ಸ್ಟೇಷನ್ ರಸ್ತೆ ಬಳಿ ಇರುವ ಪತಂಜಲಿ ಕಚೇರಿಯಿಂದ ಶ್ರೀಮಾರ್ಕಂಡೇಶ್ವರ ವೃತ್ತದವರೆಗೆ ರ‌್ಯಾಲಿ ನಡೆಯಲಿದೆ. ಫೆ.1ರಂದು ರಥ ಸಪ್ತಮಿ ಅಂಗವಾಗಿ ನೆಹರು ಕಾಲನಿಯಲ್ಲಿ 108 ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವ ಭಾರತ್ ರಾಜ್ಯ ಪ್ರಭಾರ ಕಿರಣ್‌ಕುಮಾರ ಮಾತನಾಡಿದರು. ಎಂಎಸ್‌ಪಿಎಲ್ ಸಂಸ್ಥೆಯ ಎಸ್.ಕುಮಾರ, ಪತಂಜಲಿ ಯೊಗ ಸಮಿತಿ ಜಿಲ್ಲಾ ಘಟಕದ ಮಹಿಳಾ ಪ್ರಭಾರಿ ಗೌರಮ್ಮ ಬ್ಯಾಳಿ, ಕಿಸಾನ್ ಸೇವಾ ಸಮಿತಿ ಪ್ರಭಾರ ಕೃಷ್ಣನಾಯಕ ಇದ್ದರು.