ಹೊಸಪೇಟೆ: ಕಮಲಾಪುರದಲ್ಲಿ ಕುಡಿವ ನೀರಿನ ಶಾಶ್ವತ ಪರಿಹಾರಕ್ಕಾಗಿ ಅಮೃತ್ 2.0 ಯೋಜನೆಯಡಿ ಕುಡಿವ ನೀರು ಸರಬರಾಜು ಘಟಕ ಆರಂಭವಾಗಲಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ತಾಲೂಕಿನ ಕಮಲಾಪುರದದಲ್ಲಿ ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಡಿ ಸುಧಾರಿತ ಕುಡಿವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಶುಕ್ರವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದಲ್ಲಿ ಫೀಡರ್ ಮೇನ್ ಕೊಳವೆ ಮಾರ್ಗ, 10 ಲಕ್ಷ ಲೀಟರ್ ಸಾಮಾರ್ಥ್ಯದ ಮೇಲ್ಮಟ್ಟ ಜಲ ಸಂಗ್ರಹಗಾರ ನಿರ್ಮಾಣ, 6199 ಕಿಲೋ ಮೀಟರ್ ವಿತರಣಾ ಜಾಲಾ ಹಾಗೂ ಪಟ್ಟಣದಲ್ಲಿ ಸುಮಾರು 6 ಸಾವಿರ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುವುದು. ಹಾಲಿ 4.54 ಎಂಎಲ್‌ಡಿ ಸಾಮಾರ್ಥ್ಯದ ಜಲಶುದ್ಧಿಕರಣ ಘಟಕವನ್ನು ನವೀಕರಣಗೊಳಿಸಲಾಗುವುದು. ಒಟ್ಟಾರೆಯಾಗಿ 26.17 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಶೇಷವಾಗಿ ಗುಣಮಟ್ಟದ ಕಾಮಗಾರಿಗೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಇದೇ ವೇಳೆ ಕಮಲಾಪುರ ಪುರಸಭೆ ಕಚೇರಿಯಲ್ಲಿನ ನೂತನ 2 ಕಸದ ವಾಹನ, ಒಂದು ಜೆಸಿಬಿ ಯಂತ್ರಕ್ಕೆ ಚಾಲನೆ ನೀಡಲಾಯಿತು. ಪುರಸಭೆ ಉಪಾಧ್ಯಕ್ಷ ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್, ಸದಸ್ಯರಾದ ಮುಕ್ತಿಯಾರ್ ಪಾಷಾ, ನಾಮನಿರ್ದೇಶಿತ ಸದಸ್ಯರಾದ ಕನ್ನೇಶ್ವರ, ಸೋಮಶೇಖರ್, ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಪ್ರಮುಖರಾದ ಖಾಜಾಹುಸೇನ್, ಕಾಳಪ್ಪ ಇತರರಿದ್ದರು.