ಸಾಮರಸ್ಯ, ಸದ್ಭಾವನೆಯಿಂದ ದೇಶದ ಪ್ರಗತಿ

ವಿಶ್ವಧರ್ಮ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಸಂಗನಬಸವ ಸ್ವಾಮೀಜಿ ಅಭಿಮತ

ಹೊಸಪೇಟೆ: ಶಾಂತಿ, ಸಮನ್ವಯತೆ ಎಲ್ಲ ಧರ್ಮಗಳಲ್ಲೂ ಇರುವ ಮೂಲಕ ಸಾಮರಸ್ಯ, ಸದ್ಭಾವನೆಯಿಂದ ಬಾಳುವುದರಿಂದ ದೇಶದ ಪ್ರಗತಿ ಸಾಧ್ಯವಿದೆ ಎಂದು ಶ್ರೀ ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿ ತಿಳಿಸಿದರು.

ಸರ್ವಧರ್ಮ ರಥೋತ್ಸವ ನಿಮಿತ್ತ ನಗರದ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಮಾ.27ರವರೆಗೆ ಹಮ್ಮಿಕೊಂಡಿರುವ ವಿಶ್ವಧರ್ಮ ದರ್ಶನ ಪ್ರವಚನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ನೀತಿವಂತರು, ಆಚಾರವಂತರು ಹಾಗೂ ಪರೋಪಕಾರ ಜೀವಿಗಳಾಗಿ ಎಲ್ಲರೂ ಜೀವಿಸಬೇಕು. ದೇಶದಲ್ಲಿ ತಪಸ್ವಿಗಳು, ಮಹಾತ್ಮರು, ಶರಣರ ಪ್ರಭಾವದಿಂದ ವಿಶಾಲತೆಯ ಭಾವನೆಯಿದೆ. ಇಲ್ಲಿ ಎಲ್ಲ ಧರ್ಮಗಳನ್ನೂ ಗೌರವಿಸಲಾಗುತ್ತದೆ. ಇಂಥ ನೆಲದಲ್ಲಿ ಜಾತಿ, ಧರ್ಮಗಳ ಭೇದವೆಣಿಸದೇ ಎಲ್ಲರೂ ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ನೆಮ್ಮದಿಯ ಜೀವನ ನಮ್ಮದಾಗಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂತೆಕೆಲ್ಲೂರು ಘನಮಠೇಶ್ವರ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಸರ್ವ ಸಮುದಾಯಗಳ ಹೂದೋಟ ಶ್ರೀ ಕೊಟ್ಟೂರುಸ್ವಾಮಿ ಮಠವಾಗಿದ್ದು, ಸರ್ವಧರ್ಮದವರನ್ನೂ ಗೌರವಿಸುವಂಥ ಕೈಂಕರ್ಯಕ್ಕೆ ಮುಂದಾಗಿರುವಂಥ ಕಾರ್ಯ ಶ್ಲಾಘನೀಯವಾಗಿದೆ. ಜಾತಿ, ಧರ್ಮಗಳನ್ನು ಬದಿಗಿರಿಸಿ ನಾವೆಲ್ಲರೂ ಸಹೋದರರು ಎನ್ನುವಂತೆ ಬದುಕಬೇಕು ಎಂದರು.

ನಾಗಲಾಪುರದ ಶ್ರೀ ಒಪ್ಪತ್ತೇಶ್ವರ ಮಠದ ಶ್ರೀ ಮರಿಮಹಾಂತ ಸ್ವಾಮೀಜಿಯವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠದ ಉತ್ತರಾಧಿಕಾರಿ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ವಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಇಳಕಲ್ಲು-ಗುಡೂರು ಹಿರೇಮಠದ ಅನ್ನದಾನ ಶಾಸ್ತ್ರಿ, ಕರೇಗುಡ್ಡ ಮಹಾಂತೇಶ್ವರ ಹಿರೇಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ, ದರೂರು ಶ್ರೀ ಸಂಗನಬಸವೇಶ್ವರ ವಿರಕ್ತ ಮಠದ ಕೊಟ್ಟೂರು ದೇಶಿಕರು ಇತರರಿದ್ದರು.

ಜೀವನದಲ್ಲಿ ಧರ್ಮ ಇಲ್ಲದಿದ್ದರೆ ಎಲ್ಲವೂ ಅಸ್ತವ್ಯವಸ್ತವಾಗಿ ಅಧರ್ಮ ತಾಂಡವವಾಡಲಿದೆ. ಹೀಗಾಗಿ, ಧರ್ಮ ಬಿಟ್ಟು ಬದುಕುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಇಳಕಲ್ಲು-ಗುಡೂರು ಹಿರೇಮಠದ ಅನ್ನದಾನ ಶಾಸ್ತ್ರಿ ಅವರು ವಿಶ್ವಧರ್ಮ ದರ್ಶನ ಪ್ರವಚನದಲ್ಲಿ ತಿಳಿಸಿದರು. ಇನ್ನೊಬ್ಬರಿಗೆ ನೋವಾಗದ ರೀತಿ ಬದುಕುವುದು ನಿಜವಾದ ಧರ್ಮವಾಗಿದೆ. ಕಾಪಾಡುವುದೇ ಕರುಣೆ. ಸಕಲರಿಗೆ ಲೇಸನೇ ಬಯಸುವಂಥ ಶರಣರ ವಚನದ ಸಾರದಂತೆ ನಾವೆಲ್ಲ ಜಾತಿ, ಮತ, ಪಂಥಗಳಿಂದ ದೂರ ಉಳಿದು ಬದುಕಬೇಕಿದೆ ಎಂದರು. ಸೋಂತ ಸಂಗಮೇಶ ಗವಾಯಿ ಸಂಗೀತ ಪ್ರಸ್ತುತ ಪಡಿಸಿದ್ದು, ಕಾಳಗಿ ಮಹಾಂತೇಶ್ ತಬಲಾ ಸಾಥ್ ನೀಡಿದರು.