ಜನರಲ್ಲಿ ಆತಂಕ ತುಂಗಭದ್ರಾ ಜಲಾಶಯದಲ್ಲಿ ಈ ಸಮಸ್ಯೆ ಇಂದು-ನಿನ್ನೆಯದಲ್ಲ
ವೀರೇಂದ್ರ ನಾಗಲದಿನ್ನಿ
ಹೊಸಪೇಟೆ: ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದ ಎಂಟು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ ನೀರು ನೀಲಿ ಮತ್ತು ಹಸಿರು ಬಣ್ಣಕ್ಕೆ ತಿರುಗಿದೆ.
ಇದನ್ನೂ ಓದಿರಿ:ಸಿಂಗಟಾಲೂರು ಬ್ಯಾರೇಜ್ನಿಂದ 23,166 ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ
ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ವಾರದ ಹಿಂದೆಯಷ್ಟೇ ಬಂದಿರುವ ಬೆನ್ನಲ್ಲೇ ಜಲಾಶಯದ ನೀರಿನ ಬಣ್ಣ ಅಸಹಜವಾಗಿ ಬದಲಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ನದಿ ನೀರಿನಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ವಾರ ಹಾವೇರಿ ಜಿಲ್ಲೆಯ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನದಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ವಿಪರೀತ ರಾಸಾಯನಿಕ ಅಂಶಗಳು ಇದರಲ್ಲಿ ಕಂಡುಬಂದಿದ್ದರಿಂದ ಕುಡಿಯಲು ಯೋಗ್ಯವಲ್ಲ ಎಂದು ಪ್ರಯೋಗಾಲಯದ ವರದಿ ಎಚ್ಚರಿಸಿತ್ತು. ಇದು ಮಾಸುವ ಮುನ್ನವೇ ಜಲಾಶಯದಲ್ಲಿ ನೀರಿನ ಬಣ್ಣ ಬದಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕಿಡ್ನಿಗೆ ಆಗುತ್ತಾ ಸಮಸ್ಯೆ?
ಸಯನೋ ಹೆಸರಿನ ಬ್ಯಾಕ್ಟೀರಿಯ ಋಣ-ಧನಾತ್ಮಕವಾಗಿ ಪರಿಣಮಿಸುತ್ತದೆ. ನದಿ ನೀರಿನಲ್ಲಿರುವ ರಾಸಾಯನಿಕ ಅಂಶಗಳನ್ನು ಕಡಿಮೆ ಮಾಡುವ ಮೂಲಕ ನೀರು ಶುದ್ಧೀಕರಿಸುತ್ತದೆ. ಆದರೆ, ನೀಲಿ-ಹಸಿರು ನೀರನ್ನು ಯಥಾವತ್ತಾಗಿ ಸೇವಿಸುವುದು ಅಪಾಯಕಾರಿ. ಕಿಡ್ನಿಗೆ ಸಮಸ್ಯೆಯಾಗುತ್ತದೆ.
ಜಲಾಶಯದಲ್ಲಿರುವ ಅಪರೂಪದ ನೀರು ನಾಯಿ, ಮೀನು ಮತ್ತಿತರೆ ಜಲಚರಗಳ ಜೀವಕ್ಕೆ ಹಾನಿಯಾಗುತ್ತದೆ. ಈ ನೀರಿನಲ್ಲಿ ಈಜುವುದರಿಂದ ಕಣ್ಣು ಉರಿಯಾಗುವುದು, ಮೈತುರಿಕೆ ಬರುವುದರ ಜತೆಗೆ ಚರ್ಮ ರೋಗಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಇದಕ್ಕೇನು ಕಾರಣ?
ತುಂಗಭದ್ರಾ ಜಲಾಶಯಕ್ಕೆ ಮಲೆನಾಡಿನಿಂದ ನೀರು ಹರಿದು ಬರುತ್ತದೆ. ಅಲ್ಲಿ ಬೆಳೆಯುವ ಕಾಫಿ-ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ಹೆಚ್ಚಾಗಿ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ.
ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ರಾಸಾಯನಿಕಗಳನ್ನು ಹೀರಿಕೊಳ್ಳುವ ಗಿಡಗಳು, ಹೆಚ್ಚುವರಿಯಾಗಿದ್ದ ಮಳೆ ನೀರಿನೊಂದಿಗೆ ನದಿ ಮೂಲಗಳಿಗೆ ಸೇರುತ್ತವೆ. ಅದರೊಂದಿಗೆ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ವಿವಿಧ ಕಾರ್ಖಾನೆಗಳಿಂದ ತ್ಯಾಜ್ಯ ನೇರವಾಗಿ ನದಿಗೆ ಹರಿಸಲಾಗುತ್ತದೆ.
ನದಿ ತೀರದ ನಗರ, ಜನವಸತಿ ಪ್ರದೇಶದ ತ್ಯಾಜ್ಯವೂ ನೇರ ನದಿಗೆ ಸೇರುತ್ತಿರುವುದರಿಂದ ಅದು ಕಲುಷಿತವಾಗುತ್ತಿದೆ ಎಂಬ ಆರೋಪ ಬಲವಾಗಿದೆ.
ತ್ಯಾಜ್ಯ ನೀರಿನಲ್ಲಿರುವ ರಂಜಕ, ಗಂಧಕ ಮತ್ತಿತರೆ ರಾಸಾಯನಿಕ ಪದಾರ್ಥಗಳು ನದಿಗೆ ಸೇರುವುದರಿಂದ ಮಳೆಗಾಲದ ಹೊಸ ನೀರಿನಲ್ಲಿ ಸಯನೋ ಎಂಬ ಬ್ಯಾಕ್ಟೀರಿಯ ಹುಟ್ಟಿಕೊಳ್ಳುತ್ತದೆ.
ಕೆಲ ವಾರಗಳ ಕಾಲ ನಿರಂತರ ಮೋಡ ಮುಸುಕಿದ ವಾತಾವರಣ ಮತ್ತು ನಾಲ್ಕೈದು ದಿನ ಬಿರು ಬಿಸಿಲು ಬಿಡುವುದರಿಂದ ಈ ಬ್ಯಾಕ್ಟೀರಿಯಾ ನೀರಿನ ಆಳದಿಂದ ಮೇಲೇಳುತ್ತದೆ.
ಈ ವೇಳೆ ದ್ವುತಿ ಸಂಶ್ಲೇಷಣೆ ಕ್ರಿಯೆ ನಡೆದು, ಬ್ಯಾಕ್ಟೀರಿಯ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನೀರಿನ ಬಣ್ಣ ಬದಲಾದಂತೆ ಕಂಡು ಬರುತ್ತದೆ ಎನ್ನುತ್ತಾರೆ ಪರಿಸರವಾದಿಗಳು.
ಮಾನವ ಮತ್ತು ಜಲಚರಗಳ ಹಿತದೃಷ್ಟಿಯಿಂದ ನದಿ ಮೇಲ್ಭಾಗದ ಜನರು ಕ್ರಿಮಿನಾಶಯಕಗಳ ಬಳಕೆ ಕಡಿಮೆ ಮಾಡಬೇಕು. ನೀಲಿ-ಹಸಿರು ಇದ್ದ ಸಂದರ್ಭ ನೀರನ್ನು ನೀಟಾಗಿ ಶುದ್ಧೀಕರಿಸಿದ ಬಳಿಕವೇ ಕುಡಿಯಬೇಕು. ಈ ಸಮಸ್ಯೆಯಿಂದಾಗುವ ಪರಿಣಾಮಗಳ ಕುರಿತಾಗಿ ರೈತಾಪಿ ಜನರಲ್ಲಿ ಜಾಗೃತಿ ಮೂಡಿಸಬೇಕು.
|ಡಾ.ಸಮದ್ ಕೊಟ್ಟೂರು ಪರಿಸರವಾದಿ.