ಹೊಸಪೇಟೆ: ದೇವಸ್ಥಾನದ ಒಳಗೆ ಪ್ರವೇಶ ಮಾಡಬೇಕು ಎಂದರೆ ಮಹಿಳೆಯರು ಹಣೆಗೆ ಕುಂಕುಮ ಹಾಗೂ ಪುರುಷರು ತಿಲಕ ಇಟ್ಟುಕೊಳ್ಳುವುದು ಕಡ್ಡಾಯ ಎಂಬ ಆದೇಶ ನಗರದ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಜಾರಿ ಮಾಡಲಾಗಿದೆ.
ರಾಜ್ಯದ ಆಯ್ದ ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಯಲ್ಲಿವೆ. ಅದರಂತೆ ಈ ಭಾಗದ ದೇವಸ್ಥಾನದಲ್ಲಿ ಕೂಡ ಜಾಗೃತಿ ಮೂಡಲಿ. ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಜಾಗೃತಿ ಮೂಡಿಸುವುದು ಅಗತ್ಯವಿದೆ. ಆದ್ದರಿಂದ ಎಸ್.ಎಸ್.ಕೆ. ಸಮಾಜದಿಂದ ನಿರ್ವಹಣೆಗೆ ಒಳಪಡುವ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಕುಂಕುಮ ಇಟ್ಟುಕೊಳ್ಳುವುದು ಕಡ್ಡಯ ಎಂದು ಕಳೆದ ಮೂರು ದಿನಗಳ ಹಿಂದೆ ಜಾರಿ ಮಾಡಲಾಗಿದೆ. ಹಾಗೂ ದೇವಸ್ಥಾನದ ಆವರಣದಲ್ಲಿ ಕೂಡ ಸೂಚನ ಫಲಕ ಅಳವಡಿಸಲಾಗಿದೆ.
ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಕೆಲ ದೇವಸ್ಥಾನದ ಪಾವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸಂಪ್ರದಾಯಿಕ ಉಡುಪು ಕಡ್ಡಾಯ ಮಾಡಬೇಕು. ಪಾಶ್ಚಾತ್ಯ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವವರಿಗೆ ಒಳ ಪ್ರವೇಶ ನೀಡಬಾರದು. ಭಾರತೀಯ ಸಂಪ್ರದಾಯಿಕ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸುತ್ತವೆ. ಇದಕ್ಕೆ ಪ್ರೇರಣೆ ನೀಡುವಂತೆ ಇಲ್ಲಿನ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಹಣೆಗೆ ಕುಂಕುಮ ಕಡ್ಡಾಯ ಎಂದು ಜಾರಿಯಲ್ಲಿರುವುದು ವಿಶೇಷವಾಗಿದೆ. ಕುಂಕುಮ ಕೂಡ ಒಂದು ತಟ್ಟೆಯಲ್ಲಿ ಹಾಕಿ ಪ್ರವೇಶ ದ್ವಾರದ ಮುಂದೆ ಇಡಲಾಗಿದೆ. ಈ ಕಾರ್ಯ ಹಲವು ಕಡೆಯಿಂದ ದೇವಸ್ಥಾನ ಮಂಡಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಂಪ್ರದಾಯ ಮರೆಯುತ್ತಿದ್ದಾರೆ. ಮಹಿಳೆಯರಾಗಲಿ ಪುರುಷರಾಗಲಿ ಪಾಶ್ಚಾತ್ಯ ಪದ್ದತಿಗೆ ಮಾರು ಹೊಗಿದ್ದಾರೆ. ಆದ್ದರಿಂದ ದೇವಸ್ಥಾನಗಳಲ್ಲಿ ನಮ್ಮ ಸಂಪ್ರದಾಯ ಪಾಲಿಸಲಿ ಎಂದು ಜಾಗೃತಿಗಾಗಿ ಕಳೆದ ಮೂರು ದಿನದ ಹಿಂದೆ ಸಭೆ ನಡೆಸಿ ತಿರ್ಮಾನ ಮಾಡಲಾಗಿದೆ. ಹಲವು ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಪ್ರಕಾಶ್, ಎಸ್.ಎಸ್.ಕೆ.ಸಮಾಜದ ಪ್ರಮುಖ, ಹೊಸಪೇಟೆ