ಕನಸಾಗಿ ಉಳಿದ ಸಕ್ಕರೆ ಕಾರ್ಖಾನೆ

blank

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಈ ಭಾಗದ ರೈತರಿಂದ ಹೆಚ್ಚಾಗಿ ಬೆಳೆಯಲಾಗುವ ಕಬ್ಬು ಕಟಾವು ಆರಂಭವಾಗಿದ್ದು, ದೂರದ ಸಕ್ಕರೆ ಕಾರ್ಖಾನೆಗೆ ನಷ್ಟದಲ್ಲಿ ಕಬ್ಬು ಸಾಗಿಸುವುದು ಅನಿವಾರ್ಯವಾಗಿದೆ. ಮುಖ್ಯಮಂತ್ರಿಗಳೇ ಇತ್ತ ಗಮನಹರಿಸಿ ಎಂಬುದು ರೈತರ ಅಳಲಾಗಿದೆ.

ತುಂಗಭದ್ರಾ ಜಲಾಶಯದ ಕಾಲುವೆಗಳಿಂದ ನೀರು ಪಡೆಯುವ ಈ ಭಾಗದ ರೈತರಿಗೆ ದೂರದ ಕಾರ್ಖಾನೆಗಳೇ ಈಗ ಆಸರೆಯಾಗಿವೆ. ಐಎಸ್‌ಆರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ಸರ್ಕಾರದಿಂದ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಒಂದು ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಬೇಕಿದೆ ಎಂದು ಸಿಎಂ ಸೇರಿ ನಗರಕ್ಕೆ ಆಗಮಿಸುವ ಸಚಿವರಿಗೆ, ಅಧಿಕಾರಿಗಳಿಗೆ ರೈತರು ಆಗಾಗ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಎಲ್ಲ ಪಕ್ಷದ ರಾಜಕೀಯ ನಾಯಕರು ಕೇವಲ ಭರವಸೆಯಲ್ಲೇ ಮನೆ ಕಟ್ಟುತ್ತಿದ್ದಾರೆ. ಇನ್ನೂ ಕಳೆದ ಸರ್ಕಾರದಲ್ಲಿ ಮಾಜಿ ಸಚಿವ ಆನಂದ್‌ಸಿಂಗ್ ಸಚಿವ ಸಂಪುಟದಲ್ಲಿ ಸಕ್ಕರೆ ಕಾರ್ಖಾನೆಗೆ ಅನುಮೋದನೆ ಪಡೆದು, ಕಾರಿಗನೂರಿನ ಬಳಿ ಕಾಮಗಾರಿ ಭೂಮಿ ಪೂಜೆ ಕೂಡ ಮಾಡಿದರು. ಕಾಂಗ್ರೆಸ್ ಪಕ್ಷದ ಶಾಸಕ ಎಚ್.ಆರ್.ಗವಿಯಪ್ಪ ನಾಗೆನಹಳ್ಳಿ ಬಳಿ ಕಾರ್ಖಾನೆ ಜಾಗವನ್ನು ಸ್ಥಳಂತರಿಸಿದರು. ಕೇವಲ ರಾಜಕೀಯವಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೊಸಪೇಟೆ, ಕಮಲಾಪುರ, ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಒಟ್ಟು 3,732 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಅಂದಾಜು 5 ಲಕ್ಷ ಟನ್ ವರೆಗೆ ಇಳುವರಿ ಬರುತ್ತದೆ. ಕೊಟ್ಟೂರು ಹೊರತುಪಡಿಸಿ ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಹೆಕ್ಷೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಆದರೆ, ಇಲ್ಲಿ ಸಕ್ಕರೆ ಕಾರ್ಖಾನೆ ಇಲ್ಲದೇ ಇರುವುದರಿಂದ ಸಿರುಗುಪ್ಪ, ಮುಂಡರಗಿ, ದುಗ್ಗಾವತಿ, ಮೈಲಾರ ಸೇರಿದಂತೆ ದೂರದ ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಸಧ್ಯ ಟನ್ ಕಬ್ಬಿಗೆ 2950 ರೂ. ಕಾರ್ಖಾನೆಗಳು ಬೆಲೆ ನಿಗದಿ ಮಾಡಿವೆ. ಕಬ್ಬು ಸಾಗಣೆ ವೆಚ್ಚ ಹೊರತುಪಡಿಸಿ ಟನ್ ಕಬ್ಬು ಕಟಾವಿಗೆ 500 ರಿಂದ 700 ರೂ., ಹೊಲದಿಂದ ರಸ್ತೆಗೆ ಕಬ್ಬು ತರಲು 150 ರೂ., ಲಾರಿ ತುಂಬುವ ಕೂಲಿ 110 ರಿಂದ 200 ರೂ., ಹಾಗೂ ಚಾಲಕನ ಭತ್ತ್ತೆ 2000 ರೂ., ಕಾರ್ಮಿಕರ ಭತ್ತ್ತೆ 300 ರೂ. ಸೇರಿ ಉಳಿದೆಲ್ಲಾ ನಿರ್ವಹಣೆ ವೆಚ್ಚ ತೆಗೆದು ರೈತರಿಗೆ ಒಂದು ಟನ್‌ಗೆ 1500 ರೂ.ರಿಂದ 1700ರೂ.ವರೆಗೆ ಮಾತ್ರ ಪಾವತಿಯಾಗುತ್ತದೆ. ಹಾಕಿದ ಬಂಡವಾಳಕ್ಕೆ ಹೋಲಿಸಿದರೆ ಕಬ್ಬು ಬೆಳೆಗಾರರು ನಷ್ಟದಲ್ಲಿ ಕೈ ತೊಳೆಯುವಂತಾಗಿದೆ.
ಕೇಂದ್ರ ಸರ್ಕಾರದ ಎಫ್‌ಆರ್‌ಪಿ ಒಂದು ಟನ್ ಕಬ್ಬಿಗೆ 3150 ರೂ. ಆದರೆ, ಸದ್ಯ ಕಾರ್ಖಾನೆಯಿಂದ 2,950 ರೂ.ಗೆ ಖರೀದಿ ಮಾಡುತ್ತಿದ್ದಾರೆ. ಒಂದು ಟನ್‌ಗೆ 200 ರೂ. ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಹೊರಗಡೆ ಸಾಗಣೆ ಮಾಡಿದರೆ ಕಟಾವು ಹಾಗೂ ಬೆಳೆ ನಿರ್ವಹಣೆ ಸೇರಿ ರೈತರಿಗೆ ಲಾಭಕ್ಕಿಂತ ನಷ್ಟವಾಗುತ್ತಿದೆ. ಇಲ್ಲಿ ಈ ವರ್ಷ, ಮುಂದಿನ ವರ್ಷ ಕಾರ್ಖಾನೆ ಆರಂಭವಾಗುತ್ತದೆ ಎಂಬ ಭರವಸೆಯೊಂದಿಗೆ ಕಬ್ಬು ಬೆಳೆಯುತ್ತಿದ್ದೇವೆ. ಸರ್ಕಾರಕ್ಕೆ ನಮ್ಮ ಗೋಳು ಕೇಳಿಸುವುದು ಯಾವಾಗ ಎನ್ನುವಂತಾಗಿದೆ ಎಂಬುದು ಕಬ್ಬು ಬೆಳೆಗಾರ ಅಳಲಾಗಿದೆ.

ಹೆಚ್ಚದ ನಿರ್ವಹಣೆ ಭಾರ

ರೈತರು ಕಬ್ಬು ಬೆಳೆಯಲು ಡಿಎಪಿ 1450 ರೂ. ರಿಂದ 1600 ರೂ., ಯೂರಿಯಾ 300 ರೂ. ರಿಂದ 450 ರೂ., 1026 ನಂಬರ್‌ನ 1500 ರಿಂದ 1620 ರೂ. ರವರೆಗೆ ರಾಸಾಯನಿಕ ಗೊಬ್ಬರಗಳು, ಔಷದಿ, ಕೂಲಿ ಕಾರ್ಮಿಕರ ಸೇರಿದಂತೆ ಒಂದು ಎಕರೆಗೆ 40 ರಿಂದ 50 ಸಾವಿರ ರೂ. ಖರ್ಚು ಭರಿಸಬೇಕಾಗುತ್ತದೆ. ಒಂದು ಟನ್ ಕಬ್ಬು 2,950 ಕಾರ್ಖಾನೆಯವರು ದರ ನಿಗದಿ ಮಾಡಿದ್ದಾರೆ. ಈ ಲೆಕ್ಕದಲ್ಲಿ ಎಕರೆಗೆ 50 ರಿಂದ 60 ಸಾವಿರ ರೂ. ಬರುತ್ತದೆ. ನಿರ್ವಹಣೆ ಖರ್ಚು ತೆಗೆದರೆ 5 ರಿಂದ 10 ಸಾವಿರ ರೂ. ಮಾತ್ರ ಉಳಿಯುತ್ತದೆ. ಇಳುವರಿ ಕಡಿಮೆ ಬರುವ ರೈತರು ನಷ್ಟದಲ್ಲಿ ಕಬ್ಬು ಸಾಗಣೆ ಮಾಡಬೇಕಿದೆ ಎನ್ನುವುದು ರೈತರ ಮಾತಾಗಿದೆ.

ಈ ಭಾಗದಲ್ಲಿ ಸಕ್ಕರೆ ಬಹುಮುಖ್ಯವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆ ವೇಳೆ, ಸಕ್ಕರೆ ಕಾರ್ಖಾನೆಗೆ ಹಣ ಹೂಡಿಕೆ ಮಾಡಲು ನನಗೆ ಸಲಹೆ ನೀಡಿದ್ದಾರೆ. ಹಾಗಾಗಿ ನಾನೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಆಲೋಚಿಸುತ್ತಿರುವೆ. ನಾಗೇನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ, ರೈತರಿಗೂ ಅನುಕೂಲ ಆಗಲಿದೆ.
– ಎಚ್.ಆರ್‌. ಗವಿಯಪ್ಪ, ಶಾಸಕ, ಹೊಸಪೇಟೆ

ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಕಡಿಮೆಗೆ ಖರೀದಿ ಮಾಡುವಂತಿಲ್ಲ. ಪರಿಶೀಲಿಸಿ ಕ್ರಮಕೈಗೊಳ್ಳುವೆ. ಇನ್ನೂ ಈ ಭಾಗದ ರೈತರ ಬೇಡಿಕೆ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರಕ್ಕೆ ಮಹಿತಿ ನೀಡಿರುವೆ.
– ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

ಇಲ್ಲಿ ಸಾವಿರಾರು ಟನ್ ಕಬ್ಬು ಬೆಳೆಯುತ್ತಾರೆ. ಇದ್ದ ಕಾರ್ಖಾನೆ ಮುಚ್ಚಲಾಗಿದೆ. ರೈತರು ನಷ್ಟದಲ್ಲಿ ಕಬ್ಬು ಕಟಾವು ಮಾಡಬೇಕಿದೆ. ಸರ್ಕಾರದಿಂದ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿ, ಇಲ್ಲಿನ ರೈತರಿಗೆ ಆಸರೆಯಾಗಬೇಕಿದೆ.
– ಎಸ್.ಎಸ್.ನಾಯಕ, ರೈತ, ಕಮಲಾಪುರ

Share This Article

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Liver Health: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು…