ಹೊಸಪೇಟೆ: ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಿದರೆ, ತಂದೆ-ತಾಯಿಗಳನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಒಂದು ಸ್ಕೂಟಿ, ಲ್ಯಾಪ್‌ಟಾಪ್ ಹಾಗೂ ನಗದು ಬಹುಮಾನ ವಿತರಿಸಿ ಮಾತನಾಡಿದ ಅವರು, ಯಶವಂತ್ 624 ಅಂಕಗಳನ್ನು ಗಳಿಸಿದ್ದು ಕೊಟ್ಟ ಮಾತಿನಂತೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಿರುವೆ. ನಿಹಾರ್ 622, ಲಕ್ಷ್ಮಿ, ಅಭಿಷೇಕ, ಹೇಮಂತ್, ಉಮೇಶ್ ತಲಾ 621 ಅಂಕಗಳನ್ನು ಗಳಿಸಿದ್ದು, ತಲಾ 50 ಸಾವಿರ ರೂ. ನಗದು ಬಹುಮಾನ ಕೂಡ ನೀಡಿರುವೆ. ಇವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಹಾಗಾಗಿ ಅವರಿಗೆ ಪ್ರೋತ್ಸಾಹಿಸಲು ಧನ ಸಹಾಯ ಮಾಡಿರುವೆ ಎಂದರು.
ಮಕ್ಕಳಿಗೆ ನೀಡಿರುವ ಸ್ಕೂಟಿಯನ್ನು ಲೈಸೆನ್ಸ್ ಪಡೆಯುವ ವರೆಗೆ ತಾಯಿ, ತಂದೆ ಚಲಾಯಿಸಬೇಕು. ಮಕ್ಕಳ ಓದಿಗೆ ಅನುಕೂಲ ಆಗಲಿ ಎಂದು ಸ್ಕೂಟಿ ನೀಡಲಾಗಿದೆ. ಪಿಯುಸಿಯಲ್ಲಿ ಇನ್ನಷ್ಟು ಸಾಧನೆ ಮಾಡಿ ತಮ್ಮ ಕನಸು ಈಡೇರಿಸಿಕೊಳ್ಳಬೇಕು ಎಂದರು.
ವಿಜಯನಗರ ಜಿಲ್ಲೆ ರಾಜ್ಯದಲ್ಲಿ 18ನೇ ಸ್ಥಾನ ಪಡೆದಿದೆ. ಈ ಹಿಂದೆ ಕಳಪೆ ಸಾಧನೆ ಮಾಡಿತ್ತು. ಈ ವರ್ಷ ಇನ್ನಷ್ಟು ಸಾಧನೆ ಮಾಡಬೇಕಿದೆ. ಈ ಭಾಗದ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಬೇಕು ಎಂದರು.
ಬಿಇಒ ಶೇಖರ ಹೊರಪೇಟೆ, ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಹುಲಿಬಂಡಿ, ಪ್ರಮುಖರಾದ ದಾದಾಪೀರ್, ಸಿ.ಎ.ಗಾಳೆಪ್ಪ ಇತ್ತಿತರರಿದ್ದರು.
ಐದು ಲಕ್ಷ ಘೋಷಣೆ
ಬಾಲಕಿ ಲಕ್ಷ್ಮೀ 621 ಅಂಕಗಳನ್ನು ಗಳಿಸಿದ್ದು, ಮರು ಎಣಿಕೆಗೆ ಅರ್ಜಿ ಸಲ್ಲಿಸುತ್ತಿದ್ದಾಳೆ. ಇದರಲ್ಲೂ 624 ಅಂಕಗಳನ್ನು ಬಾರದೇ ಇದ್ದಲ್ಲಿ, ಮರು ಪರೀಕ್ಷೆ ಬರೆಯುವೆ ಎಂದಿದ್ದಾಳೆ. ಒಂದು ವೇಳೆ 624 ಅಂಕಗಳನ್ನು ಗಳಿಸಿದರೆ, ಐದು ಲಕ್ಷ ರೂ. ಬಹುಮಾನ ನೀಡುವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು.