ಕಾಯಕದ ಬಗ್ಗೆ ಕೀಳೆಂಬ ಭಾವ ಸಲ್ಲದು- ಜಗದ್ಗುರು ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತ ದೇವರು ಹೇಳಿಕೆ

ಹೊಸಪೇಟೆ: ಹಡಪದ ಸಮುದಾಯದವರು ದುಡಿದು ತಿನ್ನುವವರು. ಅವರ ಕಾಯಕದ ಬಗ್ಗೆ ಯಾರೂ ಕೀಳೆಂಬ ಭಾವನೆ ತೋರಬಾರದು. ಹಡಪಿಗರು ಇಲ್ಲದೇ ಹೋದರೆ ಎಲ್ಲರೂ ವಿಕಾರಿಗಳಾಗಬೇಕಾಗುತ್ತದೆ ಎಂದು ನವದೆಹಲಿಯ ಶ್ರೀ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತ ದೇವರು ತಿಳಿಸಿದರು.

ನಗರಸಭೆ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಡಪದ ಸಮುದಾಯದವರು ಸಂಘಟನೆಯಾಗುವ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕು. ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿವಶರಣ ಹಡಪದ ಅಪ್ಪಣ್ಣ, ಶಿವಶರಣೆ ಲಿಂಗಮ್ಮ ಸೇರಿ ಬಸವಾದಿ ಶಿವಶರಣರ ವಿಚಾರಗಳನ್ನು ಅರಿತು ಅದರಂತೆ ಜೀವನ ನಡೆಸಬೇಕು ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹಡಪದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಎಚ್.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಟಿ.ವೆಂಕೋಬಪ್ಪ, ಯುವ ಮುಖಂಡ ಸಂದೀಪ್ ಸಿಂಗ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ಲಿಂಗಾಯತ ಹಡಪದ ಅಪ್ಪಣ್ಣ ಸಮುದಾಯದ ತಾಲೂಕು ಗೌರವಾಧ್ಯಕ್ಷ ಹಡಪದ ಶೇಖರಪ್ಪ, ಅಧ್ಯಕ್ಷ ಹಡಪದ ಬಸವರಾಜ, ಕಾರ್ಯದರ್ಶಿ ಜೈ ಪ್ರಕಾಶ, ವೀರಶೈವ ಲಿಂಗಾಯತ ಸಮುದಾಯದ ತಾಲೂಕು ಅಧ್ಯಕ್ಷ ಶರಣುಸ್ವಾಮಿ, ಕಾರ್ಯದರ್ಶಿ ಕೆ.ರವಿಶಂಕರ್, ಅಕ್ಕನ ಬಳಗದ ತಾಲೂಕು ಅಧ್ಯಕ್ಷೆ ಅರುಣಾ ಶಿವಾನಂದ, ಬಸವ ಬಳಗದ ತಾಲೂಕು ಅಧ್ಯಕ್ಷ ಬಸವ ಕಿರಣಸ್ವಾಮಿ, ಶಸಾಪ ತಾಲೂಕು ಅಧ್ಯಕ್ಷ ಟಿ.ಎಚ್.ಬಸವರಾಜ, ವಚನ ಬಳಗದ ತಾಲೂಕು ಅಧ್ಯಕ್ಷೆ ಸೌಭಾಗ್ಯ ಲಕ್ಷ್ಮಿ, ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್, ಡಾ.ಟಿ.ಅಮರೇಶ್ವರ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವ ಪಾರ್ಕ್‌ನಿಂದ ನಗರಸಭೆ ಕಚೇರಿವರೆಗೆ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.

ಹಡಪದ ವೃತ್ತಿಯ ಬಗ್ಗೆ ಗೌರವ, ಹೆಮ್ಮೆ ಇರಬೇಕು. ಕ್ಷೌರಿಕ ವೃತ್ತಿಯು ಬ್ಯೂಟಿ ಪಾರ್ಲರ್‌ಗಳಾಗಿ ದೊಡ್ಡ ನಗರಗಳಲ್ಲಿ ಉದ್ದಿಮೆಯಾಗಿ ಬೆಳೆದಿದೆ. ಈ ವೃತ್ತಿಯನ್ನೇ ನಂಬಿ ಬದುಕುವ ಹಡಪದ ಸಮುದಾಯದವರ ಬದಲಾಗಿ ಬೇರೆಯವರು ಬ್ಯೂಟಿ ಪಾರ್ಲರ್‌ಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ, ಸಮುದಾಯ ಸಂಘಟನೆ ಮೂಲಕ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು.
|ಶ್ರೀ ಮಹಾಂತ ದೇವರು, ಪೀಠಾಧಿಪತಿ, ಶ್ರೀ ಜಗದ್ಗುರು ತೋಂಟದಾರ್ಯ ಶಾಖಾ ಮಠ ನವದೆಹಲಿ

Leave a Reply

Your email address will not be published. Required fields are marked *