ಹೊಸಪೇಟೆ: ದೇಶದಲ್ಲಿನ ಬಡತನ ನಿರ್ಮೂಲನೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಜನಸಂಖ್ಯಾ ನಿಯಂತ್ರಣ ಅನಿವಾರ್ಯ ಎಂದು ಜಿ.ಪಂ. ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ ಅಭಿಪ್ರಾಯಪಟ್ಟರು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ತಾಲೂಕು ಪಂಚಾಯಿತಿ ವಿದ್ಯಾರಣ್ಯ ಸಭಾಂಗಣದಲ್ಲಿ ಶುಕ್ರವಾರ ಅಯೋಜಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟನೆ ಮಾಡಿ ಮಾತನಾಡಿದರು.
ದೇಶದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 121 ಕೋಟಿ ಇದ್ದದ್ದು, ಈಗ 140 ಕೋಟಿಗೆ ಬಂದಿದೆ. ಪ್ರತಿ ಸೆಕೆಂಡಿಗೆ 4 ರಿಂದ 5 ಮಗು ಹುಟ್ಟಿದರೇ, ಮರಣ ಪ್ರಮಾಣ 1 ರಿಂದ 2ರಷ್ಟಾಗಿದೆ. ಇದರಿಂದ ಪ್ರತಿ ಸೆಕೆಂಡಿಗೆ 2 ರಿಂದ 3 ಮಕ್ಕಳು ಇರುವ ಜನಸಂಖ್ಯೆಗೆ ಸೇರ್ಪಡೆ ಆಗುತ್ತಿದ್ದು, ಚೀನವನ್ನು ಹಿಂದಿಕ್ಕಿದೇವೆ. ಜನಸಂಖ್ಯೆ ನಿಯಂತ್ರಣವಾದರೆ, ಪ್ರತಿಯೊಬ್ಬರಿಗೂ ಸೌಲಭ್ಯ ಸಿಗಲಿದೆ. ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದು, ಜನರಿಗೂ ಸಹ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಇರಬೇಕಾಗುತ್ತದೆ ಎಂದರು.
ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮಾತನಾಡಿ, ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ, ಆಹಾರ, ವಸತಿ ಉದ್ಯೋಗದ ಸಮಸ್ಯೆಗಳು ಸೃಷ್ಟಿಯಾಗಲಿದೆ. ಸರ್ಕಾರಗಳು ಸಹ ವಿವಿಧ ಕಾರ್ಯಕ್ರಮಗಳ ಮೂಲಕ ಜನ ನಿಯಂತ್ರಣ ಕಾರ್ಯಕ್ರಮ ಮಾಡುತ್ತಿವೆ ಜನರು ಸಹ ಸಹಕರಿಸಿ ಯೋಜನೆಗಳು ಯಶಸ್ವಿಗೊಳಿಸಬೇಕು ಎಂದರು.
ಆರೋಗ್ಯ ಇಲಾಖೆಯ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿ ಡಾ.ನಾಗರಾಜ್, ಡಾ.ಶಿವರಾಜ್, ಡಾ.ಗುರುಪ್ರಸಾದ್, ಗಂಗಮ್ಮ, ಉಮಾಮಹೇಶ್ವರಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದರು. ಡಿಎಚ್‌ಒ ಡಾ.ಶಂಕರ್ ನಾಯ್ಕ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿನಯ, ಆರ್‌ಸಿಎಚ್ ಜಂಭಯ್ಯ, ಡಿಎಚ್‌ಒ ಡಾ.ಭಾಸ್ಕರ್, ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಇತರರಿದ್ದರು.