ಹೊಸಪೇಟೆ: ಸರಿಯಾಗಿ ತೂಕ ಮಾಡಿದರೆ ಕಾಲ್ಕೇಜಿ ಮಾಂಸ ಇಲ್ಲ, ನೀನು ಎಲ್ಲರನ್ನೂ ಹೆದರಸ್ತೀಯಾ? ಎಂದು ರೌಡಿ ಶೀಟರ್‌ಗೆ ಗದರಿದ ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಇಂತಹವರ ಮೇಲೆ ಪೊಲೀಸರು ಕಣ್ಣಿಡಬೇಕು ಎಂದು ಸೂಚಿಸಿದರು.

ಇಲ್ಲಿನ ಪಟ್ಟಣ ಠಾಣೆ ಆವರಣದಲ್ಲಿ ಭಾನುವಾರ ಗರದ ಉಪ ವಿಭಾಗ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ 134 ರೌಡಿ ಶೀಟರ್‌ಗಳಿಗೆ ಕ್ಲಾಸ್ ತೆಗೆದುಕೊಂಡರು.
ತೂಕ ಮಾಡಿದರೆ ಕಾಲ್ಕೇಜಿ ಇಲ್ಲ, ಕೊಲೆ ಮಾಡ್ತಾನೆ. ಕೋರ್ಟಿಗೆ ಅಡ್ಯಾಡ್ತೀದಿಯಾ? ಕೊಲೆ ಕೇಸ್ ಏನಾಯಿತು? ಎಂದು ರೌಡಿ ಶೀಟರ್ ಓರ್ವನಿಗೆ ಪ್ರಶ್ನಿಸಿದಾಗ, ಕೊಲೆ ಕೇಸ್ ರಾಜಿ ಆಯ್ತು ಸರ್ ಎಂದು ಉತ್ತರಿಸಿದ. ಹಾಗಾದರೆ ಶವದ ಜತೆ ರಾಜಿ ಮಾಡಿಕೊಂಡಿಯಾ ಏನೋ? ಸಾಕ್ಷಿಗಳಿಗೆ ಬೆದರಿಸಿದೀಯಾ? ಕೊಲೆ ಮಾಡಿ ರಾಜಿ ಮಾಡಿಕೊಂಡೇ ಎಂದು ಹೇಳುತ್ತೀಯಾ? ದೊಡ್ಡ ಡಾನ್ ಆಗಲು ಹೊರಟಿಯಾ? ಇಂಥವರ ಮೇಲೆ ನಿಗಾ ಇಡಬೇಕು ಎಂದು ಪೊಲೀಸರಿಗೆ ಸೂಚಿಸಿದರು.
ಏ, ಪೊಲೀಸರು ಎಂದರೇ ಭಯ ಇಲ್ಲವಾ? ಜಾತ್ರೆಯಲ್ಲಿ ಮಹಿಳೆಯರು ಬಂದರೇ ಪೀಪೀ ಊದುತ್ತೀಯಾ? ಹಾಕಿ ರುಬ್ಬೀದರೆ ಗೊತ್ತಾಗುತ್ತೆ? ಮರ್ಡರ್ ಮಾಡಿ ಏನೂ ಗೊತ್ತಿಲ್ಲದಂಗೇ ನಿಲ್ಲುತ್ತೀರಾ? ಇವರಿಗೆಲ್ಲ ಜೀವದ ಬೆಲೆ, ಕಾನೂನು ಏನು ಎಂಬುದನ್ನು ತೋರಿಸಬೇಕು ಎಂದು ಎಸ್ಪಿ ಬಿ.ಎಲ್. ಶ್ರೀಹರಿಬಾಬು ರೌಡಿಶೀಟರ್‌ಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಇದೊಂದು ದೊಡ್ಡ ಗ್ಯಾಂಗ್ ಇದೆಲ್ಲ. ಏನ್ ಮಾಡಿದಾರೆ ಎಂದು ಪೊಲೀಸರನ್ನು ಎಸ್ಪಿಯವರು ಪ್ರಶ್ನಿಸಿದರು. ಮರ್ಡರ್ ಕೇಸ್‌ನಲ್ಲಿದ್ದಾರೆ. ಹೈಕೋರ್ಟ್ನಿಂದ ಜಾಮೀನು ತೆಗೆದುಕೊಂಡು ಬಂದಿದ್ದಾರೆ. ಇವರು ದಿನಾಲು ಚಿತ್ತವಾಡ್ಗಿ ಠಾಣೆಗೆ ಬಂದು ಸಹಿ ಮಾಡಲಿ. ಹೈಕೋರ್ಟ್ ಕರೆದಾಗ ಹೋಗ ಬೇಕಲ್ವಾ? ಇವರು ಮತ್ತೆ ಪರಾರಿಯಾದರೆ, ಇವರ ಮೇಲೆ ಕಣ್ಣಿಡಿ ಎಂದು ಪೊಲೀಸರಿಗೆ ಸೂಚಿಸಿದರು.
ಮೊದಲು ದುಡಿದು ತಂದೆ, ತಾಯಿ ನಾ ನೋಡಿಕೋಳ್ರೋ, ಜಾತ್ರೆಯಲ್ಲಿ ಮಹಿಳೆಯರು ಬಂದರೆ ಪೀಪೀ ಊದುತ್ತೀಯಾ? ತಾಯಿಗೆ ದುಡಿದು ಸೀರೆ ಕೊಡಿಸಿದೀಯಾ? ಇವರ ಮನೆಗೆ ಫೋನ್ ಮಾಡಿ, ತಾಯಿಗೆ ಸೀರೆ ಕೊಡಿಸಿದಾನಾ ಕೇಳಿ? ಮೊದಲು ದುಡಿದು ತಂದೆ, ತಾಯಿಗಳನ್ನು ಸಾಕೋದು ಕಲಿಯಿರಿ. ಸಮಾಜದಲ್ಲಿ ಉತ್ತಮವಾಗಿ ಬಾಳೋದು ಕಲಿಯಿರಿ. ಅದನ್ನು ಬಿಟ್ಟು ರೌಡಿಸಂ ಮಾಡ್ತೀರಾ ಎಂದು ರೌಡಿಶೀಟರ್‌ಗಳಿಗೆ ಖಡಕ್ಕಾಗಿ ಎಚ್ಚರಿಸಿದರು.
ಡಿವೈಎಸ್ಪಿ ಮಂಜುನಾಥ ತಳವಾರ, ಪಿಐಗಳಾದ ಬಟಗುರ್ಕಿ, ಮಸಗುಪ್ಪಿ, ಕಟ್ಟಿಮನಿ, ಹುಲುಗಪ್ಪ ಇತರರಿದ್ದರು.
ಹೊಸಪೇಟೆ ಉಪವಿಭಾಗದಲ್ಲಿ 134 ರೌಡಿಶೀಟರ್‌ಗಳನ್ನು ಕರೆಸಿ ಎಚ್ಚರಿಸಲಾಗಿದೆ. ಸಮಾಜದಲ್ಲಿ ಅಪರಾಧ ಚಟುವಟಿಕೆ, ಅಶಾಂತಿ ಉಂಟಾಗದAತೆ ನಿಗಾವಹಿಸಲಾಗುತ್ತಿದೆ. ಕೂಡ್ಲಿಗಿ, ಹರಪನಹಳ್ಳಿ ಉಪವಿಭಾಗದಲ್ಲೂ ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ. ಜಿಲ್ಲೆಯಲ್ಲಿ 642 ರೌಡಿಶೀಟರ್‌ಗಳಿದ್ದಾರೆ. ಇವರ ಮೇಲೆ ನಿಗಾವಹಿಸಲಾಗುತ್ತಿದೆ.
– ಬಿ.ಎಲ್.ಶ್ರೀಹರಿಬಾಬು ಎಸ್ಪಿ ವಿಜಯನಗರ