ಹೊಸಪೇಟೆ: ಸಮಾಜದಲ್ಲಿ ಮಸಣ ಕಾರ್ಮಿಕರಿಗೆ ಬಿಟ್ಟಿ ಚಾಕರಿ ಮಾಡಿಸಿಕೊಳ್ಳುತ್ತಿದ್ದಾರೆ. ಇವರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಮಸಣ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಯು ಬಸವರಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಹುತೇಕ ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಮಸಣ ಕಾರ್ಮಿಕರು ಸಂಘಟಿತರಾಗಿ, ಸಾವಿರಾರು ವರ್ಷಗಳಿಂದ ತಮಗಾದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಲು ಕೋರಿ ಹಲವು ಬಾರಿ ಮನವಿ ಮಾಡಿದ ಮೇರೆಗೆ, ಅವರ ಹಕ್ಕೊತ್ತಾಯಗಳಿಗೆ ಸರ್ಕಾರ ಕೊನೆಗೂ ಸ್ವಲ್ಪ ಮಟ್ಟಿಗೆ ಸ್ಪಂದಿಸಿದೆ. ಮಸಣ ಕಾರ್ಮಿಕರಿಗೆ 45 ವರ್ಷ ದಾಟಿದ ನಂತರ ಮಾಸಿಕ 3 ಸಾವಿರ ರೂ. ಪಿಂಚಣಿ ನೀಡಬೇಕು.
ಕುಣಿ ತೆಗೆಯುವ ಮತ್ತು ಶವ ಹೂಳುವ ಕೆಲಸವನ್ನು ಉದ್ಯೋಗ ಖಾತ್ರಿಯಡಿ ತಂದು ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು. ಮಸಣ ಕಾರ್ಮಿಕರನ್ನು ಗುರುತಿಸಿ ಅವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರವರ್ಗದಡಿ ಮೀಸಲಾತಿ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಇದೇ ಮೀಸಲಾತಿ ಉನ್ನತ ಶಿಕ್ಷಣ ಹಾಗೂ ಆರ್ಥಿಕ ಸೌಲಭ್ಯಗಳಿಗೂ ಮುಂದುವರಿಸಬೇಕು. ಮಸಣ ಕಾರ್ಮಿಕರ ಗಣತಿ ನಡೆಸಿ ಪುನರ್ವಸತಿಗೆ ಕ್ರಮವಹಿಸಬೇಕು. ಕುಣಿತ ಅಗೆಯುವ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 4 ಸಾವಿರ ರೂ. ಕೂಲಿ ಪಾವತಿಸುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಸಹ ಸಂಚಾಲಕಿ ಬಿ.ಮಾಳಮ್ಮ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ, ಪ್ರಮುಖರಾದ ರುದ್ರೇಶ್, ಪೋಗಣ್ಣ, ಕಲ್ಯಾಣಪ್ಪ, ಕುಡುಚಪ್ಪ ಇದ್ದರು.