ಹೊಸಪೇಟೆ: ರಂಗ ಕಲಾವಿದರ ತವರೂರು ಎಂಬ ಖ್ಯಾತಿಯ ಮರಿಯಮ್ಮನಹಳ್ಳಿಯ ಬಿ.ಎಂ.ಎಸ್.ಪ್ರಭು ಅವರಿಗೆ ರಾಜ್ಯ ನಾಟಕ ಅಕಾಡೆಮಿಯಿಂದ 2022-23 ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಕಳೆದ ಮುರು ದಶಕಗಳಿಗೂ ಹೆಚ್ಚು ಕಾಲದಿಂದ ರಂಗಕಲೆಯಲ್ಲಿ ಕಲಾವಿದರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ 12ನೇ ವಯಸ್ಸಿನಲಿ ರಂಗಭೂಮಿ ವೃತ್ತಿರುಣ ನಾಟಕದಿಂದ ಪಾದಾರ್ಪಣೆ ಮಾಡಿ, ಸ್ವತಂತ್ರ ಹೋರಾಟಗಾರನಾಗಿ ಅಭಿನಯಿಸಿದ ಪಾತ್ರ ಎಲ್ಲರ ಜನಮನಗಳಿಸಿತ್ತು. ಚಿಕ್ಕ ವಯಸ್ಸಿನಲಿಯೇ ಸಂಗೀತ ಮತ್ತು ನಾಟಕಕ್ಕೆ ಮಾರುಹೋಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ 1990-91ರಲ್ಲಿ ನೀನಾಸಂನಲ್ಲಿ ಡ್ರಾಮಾ ಇನ್ ಡಿಪ್ಲೊಮಾ ಮುಗಿಸಿಕೊಂಡು ನಿರಂತರವಾಗಿ ರಂಗಭೂಮಿಯಲಿ ತೊಡಗಿಕೊಂಡಿದ್ದಾರೆ. ವೃತಿ ರಂಗಭೂಮಿ, ಆಧುನಿಕ ರಂಗಭೂಮಿಯಲ್ಲಿ ಲಲಿತ ಕಲಾರಂಗದ ತಂಡದ ಮುಖ್ಯಸ್ಥನಾಗಿ ರಾಜ್ಯಾದ್ಯಾಂತ ಸರ್ಕಾರದ ಎಲ್ಲಾ ಇಲಾಖೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಭಾರ್ಗವ ಪ್ರಶಸ್ತಿ, ಬಸವ ಪ್ರಶಸ್ತಿ, ಮತ್ತು ಸಿಜಿಕೆ ಪ್ರಶಸ್ತಿಗಳು ಕೂಡ ಲಭಿಸಿವೆ. ಅಲ್ಲದೇ ಸಂಗೀತ ಮತ್ತು ನಾಟಕ ವಿಭಾಗದಲಿ. ಎ ಗ್ರೇಡ್ ತಂಡವೆAದು ರಾಜ್ಯ ಹೊರರಾಜ್ಯದಲ್ಲಿ ಹಲವು ಕಾರ್ಯಕ್ರಮ ಮಾಡಿರುತ್ತಾರೆ. ಅಂದಾಜು 48 ನಾಟಕಗಳನ್ನು ನಿರ್ದೇಶಿಸಿ ರಾಜ್ಯ ಮತ್ತು ಅಂತರ್ ರಾಜ್ಯಮಟ್ಟದಲ್ಲಿ ನಿರ್ದೇಶನ ಮಾಡಿದ ನಾಟಕಗಳು ಪ್ರಥಮ ಸ್ಥಾನವನ್ನು ಪಡೆದಿವೆ. ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವ ಪ್ರಶಸ್ತಿಯನ್ನು ನೀಡಿದ್ದಾರೆ. ಹಾಗೂ ರಾಜ್ಯ ಸರ್ಕಾರದ ನಾಟಕ ಅಕಾಡೆಮಿಯಿಂದ 2022-23 ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದು, ಗೌರವ ಸಮರ್ಪಣೆ ನಡೆಯಲಿದೆ.
ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ. ಜತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ರಂಗಭೂಮಿ ಚಟುವಟಿಕೆಗಳಲ್ಲಿ ನಿರಂತರವಾಗಿ ಕಲಾವಿದರು ತೊಡಗಿಸಿಕೊಳ್ಳಬೇಕು. ಯುವ ಸಮೂಹ ರಂಗಭೂಮಿ ಬಗ್ಗೆ ಆಸಕ್ತಿ ವಹಿಸಬೇಕು.
– ಬಿ.ಎಂ.ಎಸ್.ಪ್ರಭು, ರಂಗಕರ್ಮಿ, ಮರಿಯಮ್ಮನಹಳ್ಳಿ