ಹೊಸಪೇಟೆ: ಪರಿಶಿಷ್ಟ ಜಾತಿ ಒಳ ಮೀಸಲಾತಿ ದತ್ತಾಂಶ ಸಂಗ್ರಹಕ್ಕಾಗಿ ನೇಮಕಗೊಂಡಿರುವ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಜಿಲ್ಲೆಯ ಮಾದಿಗ ಸಮಾಜದ ದತ್ತಾಂಶ ತ್ವರಿತವಾಗಿ ನೀಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಸಂಘದ ಪದಾಧಿಕಾರಿಗಳು ಡಿಸಿ ಎಂ.ಎಸ್. ದಿವಾಕರ್‌ಗೆ ಬುಧವಾರ ಮನವಿ ಸಲ್ಲಿಸಿದರು.
ವಿಜಯನಗರ ಜಿಲ್ಲಾದ್ಯಂತ ಮಾದಿಗ ಸಮಾಜದವರಿಗೆ ಆದಿ ಕರ್ನಾಟಕ, ಹರಿಜನ ಹಾಗೂ ಮಾದಿಗ ಎಂದು ಜಾತಿ ಪ್ರಮಾಣಪತ್ರ ನೀಡಲಾಗುತ್ತಿದ್ದು, ಪ್ರಮಾಣಪತ್ರ ಪಡೆದವರೆಲ್ಲ ಮಾದಿಗ ಸಮಾಜಕ್ಕೆ ಸೇರಿದವರು. ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಆಯೋಗಕ್ಕೆ ದತ್ತಾಂಶ ಸಲ್ಲಿಸುವಾಗ ಮಾದಿಗ ಎಂದೇ ದೃಢೀಕರಣ ಪ್ರಮಾಣಪತ್ರ ಸಲ್ಲಿಸಬೇಕು ಹಾಗೂ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಅಧಿಕಾರಿ, ನೌಕರರು ಹಾಗೂ ಫಲಾನುಭವಿಗಳ ಉಪಜಾತಿಯ ಮಾಹಿತಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.