ಮಾದಿಗ ಸಮುದಾಯಕ್ಕೆ ಆದ್ಯತೆ

<ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭರವಸೆ>

ಹೊಸಪೇಟೆ(ಬಳ್ಳಾರಿ): ಮುಂಬರುವ ದಿನಗಳಲ್ಲಿ ಮಾದಿಗ ಸಮುದಾಯದ ಒಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮತ್ತು ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ಮಾಡುವುದು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ನಗರದ ಕಾಂಗ್ರೆಸ್ ಶಾಸಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಿಗ ಸಮುದಾಯದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ಸಂವಿಧಾನ ಬದ್ಧ ಹಕ್ಕು ಕೇಳುವುದು ತಪ್ಪಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವುದು ಕಾಂಗ್ರೆಸ್‌ನಿಂದ ತಪ್ಪಾಗಿದೆ. ಮುಂದೆ ಹಾಗಾಗುವುದಿಲ್ಲ ಎಂದರು.

ಬಡವರು, ದಲಿತರು, ಅಸ್ಪಶ್ಯರ ವಿರೋಧಿಯಾಗಿ ಬಿಜೆಪಿ ಕೆಲಸ ಮಾಡುತ್ತಿದ್ದು, ಆರೆಸ್ಸೆಸ್ ಹೇಳಿದಂತೆ ಬಿಜೆಪಿ ಕೇಳುತ್ತಿದೆ. ಹೀಗಾಗಿ, ದೇಶದ ಸಂವಿಧಾನ ಸುಡಬೇಕು, ಮೀಸಲಾತಿ ತೆಗೆಯಬೇಕು ಎಂದು ಕೇಂದ್ರ ಸರ್ಕಾರದ ಕೆಲ ಸಚಿವರು ಹೇಳುತ್ತಿದ್ದಾರೆ. ಸಂವಿಧಾನ ಸುಡುವ ಮತ್ತು ಮೀಸಲಾತಿ ವಿರುದ್ಧ ಧ್ವನಿ ಎತ್ತುವವರಿಗೆ ಅಧಿಕಾರ ಸಿಕ್ಕಿರುವುದು ನೋವಿನ ಸಂಗತಿ ಎಂದರು.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೇಂದ್ರದಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ 72 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರ ನಾಲ್ಕುವರೆ ವರ್ಷ ಕಳೆದರೂ ಬಿಡಿಗಾಸೂ ಕೊಟ್ಟಿಲ್ಲ ಎಂದು ದೂರಿದರು.

ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಆನಂದ್‌ಸಿಂಗ್ ಮಾತನಾಡಿದರು. ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಐಸಿಸಿ ಕಾರ್ಯದರ್ಶಿ ಆರ್.ಮಂಜುನಾಥ, ಕೆಪಿಸಿಸಿಯ ಸೂರಜ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಅಬ್ದುಲ್ ವಹಾಬ್, ರತನ್‌ಸಿಂಗ್, ಜಿಪಂ ಸದಸ್ಯರಾದ ಮುಂಡ್ರಿಗಿ ನಾಗರಾಜ, ಎ.ಮಾನಯ್ಯ, ಯರಕಲಸ್ವಾಮಿ, ಎಲ್.ಮಾರೆಣ್ಣ, ರಾಮಣ್ಣ, ನಿವೃತ್ತ ಐಜಿಪಿ ಶಿವಪ್ರಸಾದ್, ನಿಂಬಗಲ್ ರಾಮಕೃಷ್ಣ ಸೇರಿ ಇತರರಿದ್ದರು.

ಶ್ರೀರಾಮುಲು ರಾಜ್ಯ ಮಟ್ಟದ ನಾಯಕ ಅಲ್ಲ. ಅವರನ್ನು ಬಿಜೆಪಿಯಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ವಿ.ಎಸ್.ಉಗ್ರಪ್ಪ ವಾಲ್ಮೀಕಿ ಸಮುದಾಯದ ನಾಯಕರಾಗಿದ್ದಾರೆ. ಕಾಂಗ್ರೆಸ್ ಮಾತ್ರ ಮಾದಿಗ ಸಮುದಾಯದ ಅಭಿವೃದ್ಧಿ ಕುರಿತು ಚಿಂತಿಸುವ ಪಕ್ಷ. ಸಿದ್ದರಾಮಯ್ಯ ಸರ್ಕಾರದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತು ನೀಡಲಾಗಿತ್ತು. ಈ ಚುನಾವಣೆಯಲ್ಲಿ ಮಾದಿಗ ಸಮುದಾಯ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕಿದೆ.
| ಎಚ್.ಆಂಜನೇಯ, ಮಾಜಿ ಸಚಿವ

ಬಿಜೆಪಿಯ ಮನೆ ತೊರೆದಿದ್ದೇನೆ. ನಾನು ಕೂಡ ಮೋದಿ ಒಳ್ಳೆಯ ಕೆಲಸ ಮಾಡುತ್ತಾರೆಂದು ನಂಬಿದ್ದೆ. ಆದರೆ, ದೇಶದಲ್ಲಿ ಮೋದಿ ಕೊಡುಗೆ ಏನು? ಎಂದು ಆ ಪಕ್ಷದಲ್ಲಿರುವ ಹಿತೈಷಿಗಳನ್ನು ಕೇಳಿದರೆ, ಎಲ್ಲರ ಎದುರಿಗೆ ಈ ಪ್ರಶ್ನೆ ಕೇಳ್ಬೇಡಿ. ನಮಗೂ ಅದೇ ಅನುಮಾನ ಇದೆ ಎನ್ನುತ್ತಾರೆ.
| ಆನಂದ್ ಸಿಂಗ್ ಶಾಸಕ