ಹೊಸಪೇಟೆ: ಸಮಾಜದಲ್ಲಿ ಬೇರೂರಿರುವ ಬಾಲ ಕಾರ್ಮಿಕ ಪದ್ದತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಪ್ರಭಾರ್ ಬಿಇಒ ಶೇಖರ್ ಹೊರಪೇಟೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಬಾಲಕಾರ್ಮಿಕ ಯೋಜನೆ, ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಗರದ ಚಿತ್ತವಾಡ್ಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯಾವಸ್ಥೆಯ ಹಾಗು ಕಿಶೋರಾವಸ್ಥೆಯ ಮಕ್ಕಳನ್ನು ಕಾರ್ಮಿಕ ಪದ್ದತಿಗೆ ಬಳಸುವುದರಿಂದ ಮಕ್ಕಳನ್ನು ದೈಹಿಕ, ಮಾನಸಿಕವಾಗಿ ಹಾಗು ಆರ್ಥಿಕವಾಗಿ ಶೋಷಣೆಗೆ ಒಳಪಡಿಸುವುದರಿಂದ ಅವರ ಶಿಕ್ಷಣ ಹಾಗೂ ಸರ್ವಾಂಗೀಣ ಪ್ರಗತಿಯ ಅವಕಾಶಗಳನ್ನು ತಡೆಗಟ್ಟಿದಂತಾಗಲಿದೆ. ಉಚಿತ ಹಾಗು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗು ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಸೂರ್ಯಪ್ಪ ಮಾತನಾಡಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಿದೆ. ಆದ್ದರಿಂದ ಮಕ್ಕಳು 18 ವರ್ಷದವರೆಗೆ ವಿದ್ಯಾಭ್ಯಾಸಕ್ಕೆ ಮಾತ್ರ ಸಿಮೀತಗೊಳಿಸಬೇಕು ಹಾಗೂ ಶಾಲೆಯನ್ನು ಬಿಟ್ಟು ಕಾರ್ಮಿಕ ಕೆಲಸಕ್ಕೆ ಹೋಗಿರುವ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕೆಲಸವಾಗಬೇಕು. ಬಾಲ್ಯಾವಸ್ಥೆ ಹಾಗು ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಬಾರದು. ಬಾಲ ಕಾರ್ಮಿಕರು ಅಥವಾ ಕಿಶೋರ ಕಾರ್ಮಿಕರು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098, ಕಾರ್ಮಿಕರ ಸಹಾಯವಾಣಿ 155214, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಬೆಂಗಳೂರು ದೂ. 08022115291/92 ಸಂಖ್ಯೆಗೆ ಕರೆ ಮಾಡಬಹುದು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಚಿತ್ತವಾಡ್ಗಿ ಪ್ರಾಂಶುಪಾಲ ನಾಗರಾಜ್ ಹವಾಲ್ದಾರ್ ಮಾತನಾಡಿ, ಎಲ್ಲಾ ಉದ್ಯೋಗ ಮತ್ತು ಉದ್ಯೋಗ ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿ ಕೊಳ್ಳುವುದು ಹಾಗು 18 ವರ್ಷದೊಳಗೆ ಇರುವ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು .
ಪ್ರಾಂಶುಪಾಲ ನಾಗರಾಜ್ ಹವಾಲ್ದಾರ್, ವಕೀಲೆ ಶ್ವೇತಾಂಬರಿ, ದೈಹಿಕ ಶಿಕ್ಷಣಾಧಿಕಾರಿ ಶ್ರೀಕಾಂತ್, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ರುದ್ರಪ್ಪ ಅಕ್ಕಿ, ಲಿಂಗರಾಜ, ಶಿವಶಂಕರ್, ಕಾರ್ಮಿಕ ಇಲಾಖೆಯ ಈಶ್ವರ, ಮಕ್ಕಳು ಸೇರಿದಂತೆ ಇತರರಿದ್ದರು.