ಹೊಸಪೇಟೆ: ಯುವಜನತೆ ಕೆಟ್ಟ ಚಟಗಳಿಂದ ದೂರ ಉಳಿದು ದೇಹ ಮತ್ತು ಮನಸ್ಸನ್ನು ಸದೃಢ ಪಡಿಸಿಕೊಳ್ಳಲು ಕ್ರೀಡಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಅತಿ ಮುಖ್ಯ ಎಂದು ಕೆರೆತಾಂಡದ ನಾಯಕ ಜಾನ್ಯನಾಯ್ಕ ಹೇಳಿದರು.
ತಾಲೂಕಿನ ಕಮಲಾಪುರದ ಕೆರೆತಾಂಡದಲ್ಲಿ ಭಾನುವಾರ ಸಂಜೆ ನಡೆದ ಕಬ್ಬಡಿ ಪಂದ್ಯವಳಿಯಲ್ಲಿ ಮಾತನಾಡಿದರು.
ಕಬಡ್ಡಿ ಗ್ರಾಮೀಣ ಕ್ರೀಡೆಯಾಗಿದ್ದರೂ ರಾಷ್ಟ್ರ, ಅಂತಾರಾಷ್ಟ್ರೀ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಕ್ರೀಡೆಗಳನ್ನು ಸಂಘಟಿಸುವುದರಿAದ ಗ್ರಾಮಗಳ ಮಧ್ಯೆ ಬಾಂಧವ್ಯ ಬೆಳೆಯಲಿದೆ. ದೈಹಿಕ ಕಸರತ್ತು ಕಬಡ್ಡಿಯಲ್ಲಿ ಪ್ರಮುಖವಾಗಿದೆ. ಯುವಕರು, ದುಶ್ಚಟಗಳಿಂದ ದೂರ ಇದ್ದು, ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಮಲಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದರಿಂದ ಕ್ರೀಡಾಪಟು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕ್ರೀಡೆಗೆ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಪ್ರೋತ್ಸಾಹ-ನೆರವು ದೊರೆಯುತ್ತಿದೆ. ಇದರಿಂದ ಕ್ರೀಡಾಕ್ಷೇತ್ರವು ಬಲಿಷ್ಠವಾಗಲು ಸಾಧ್ಯವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡಾಪಟುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೆರವು ನೀಡುತ್ತಿದೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಕ್ರೀಡೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಸಕ್ರಿಯರಾಗಬೇಕು ಎಂದು ಕರೆ ನೀಡಿದರು.
ಪೊಲೀಸ್ ಅಧಿಕಾರಿ ಪ್ರಶಾಂತ್, ಎಸ್ಡಿಎಂಸಿ ಸದಸ್ಯ ಎಸ್.ಎಸ್.ನಾಯ್ಕ, ಪ್ರಮುಖರಾದ ಹನುಮನಾಯ್ಕ, ಕೋಮಾರಿ ನಾಯ್ಕ, ಅಶೋಕ್, ತಿರುಮಲ ಇತರರಿದ್ದರು.