ಆಸ್ಪತ್ರೆ ಅವ್ಯವಸ್ಥೆಗೆ ಸಚಿವರು ಗರಂ

ಹೊಸಪೇಟೆ: ನಗರದ ನೂರು ಹಾಸಿಗೆ ಆಸ್ಪತ್ರೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭಾನುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ಸಾರ್ವಜನಿಕರು ಮತ್ತು ರೋಗಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಆಯುಷ್ಮಾನ್ ಭಾರತ ಯೋಜನೆ ಸೇರಿ ಸರ್ಕಾರಿ ಆರೋಗ್ಯ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಹೊರಾಂಗಣದಲ್ಲಿ ಬೈಕ್ ಪಾರ್ಕಿಂಗ್ ವ್ಯವಸ್ಥೆ ಸರಿಯಿಲ್ಲ. ಇದನ್ನೆಲ್ಲ ಕಂಡು ನೀವ್ ಏನ್ ಮಾಡ್ತಿದೀರಿ ಡಾಕ್ಟ್ರೆ ಎಂದು ವೈದ್ಯರ ವಿರುದ್ದ ಗರಂ ಆದರು.

ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರೆ ವಿನಃ ಶ್ರೀಮಂತರಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಸೇವೆಗೆ ಮುಂದಾಗಿ. ಮಾಡುವ ಕೆಲಸದಲ್ಲಿ ಗೌರವ ಕಾಣಬೇಕು. ಸರ್ಕಾರಿ ಸೌಲಭ್ಯಗಳನ್ನು ರೋಗಿಗಳಿಗೆ ಮುಟ್ಟಿಸಬೇಕು. ಆಸ್ಪತ್ರೆ ನಿರ್ವಹಣೆಗೆ ಬಿಡುಗಡೆಯಾದ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಆಸ್ಪತ್ರೆಯಲ್ಲಿ ಯಾವ ಕೊರತೆ ಕಾಣಿಸಬಾರದು ಎಂದು ಆಡಳಿತಾಧಿಕಾರಿ ಸಲೀಂ ಅವರಿಗೆ ಸೂಚಿಸಿದರು. ಡಿಎಚ್‌ಒ ಶಿವರಾಜ್ ಹೆಡೆ, ಟಿಎಚ್‌ಒ ಡಾ.ಭಾಸ್ಕರ್, ಡಾ.ಸೋಮಶೇಖರ್, ಡಾ.ಹರಿಪ್ರಸಾದ್, ಹಿರಿಯ ಆರೋಗ್ಯ ಸಹಾಕರ ಸಂಘದ ಜಿಲ್ಲಾಧ್ಯಕ್ಷ ಎಂ.ಧರ್ಮನಗೌಡ ಇತರರಿದ್ದರು.