ನಿವೇಶನ ರಹಿತರಿಗೆ ಭೂಮಿ ನೀಡಲು ಒತ್ತಾಯಿಸಿ ಸಿಪಿಎಂ ಮುಖಂಡರ ಪ್ರತಿಭಟನೆ

ಹೊಸಪೇಟೆ: ನಗರದಲ್ಲಿ ಒಂದು ಲಕ್ಷ ಜನರು ನಿವೇಶನ ರಹಿತರಿದ್ದು, ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸಾವಿರ ಎಕರೆ ಭೂಮಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಹಸಿಲ್ ಕಚೇರಿ ಮುಂದೆ ಸಿಪಿಎಂ ತಾಲೂಕು ಘಟಕ ಬುಧವಾರ ಪ್ರತಿಭಟನೆ ನಡೆಸಿತು.

ಮುಖಂಡ ಎಂ.ಜಂಬಯ್ಯ ನಾಯಕ ಮಾತನಾಡಿ, ನಗರದ ಅನೇಕ ಕಡೆ ನಿವೇಶನ, ವಸತಿ ರಹಿತರಿದ್ದು, ಅವರೆಲ್ಲ ಸೂರಿಲ್ಲದಂತೆ ಗುಡಿಸಲು, ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೆ ಗಮನಹರಿಸಿ ನಿವೇಶನರಹಿತರಿಗೆ ಜಾಗ ನೀಡುವ ಮೂಲಕ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವು ಜಿಂದಾಲ್‌ಗೆ 3667 ಎಕರೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿರುವುದು ಖಂಡನೀಯ. ಈಗಾಗಲೇ 10 ಸಾವಿರ ಎಕರೆಯಲ್ಲಿ ಕಂಪನಿಯು ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಭೂಮಿಯನ್ನು ಕಂಪನಿಗೆ ಪರಭಾರೆ ಮಾಡಬಾರದು ಎಂದು ಮನವಿ ಮಾಡಿದರು.

ಬಡ ರೈತರಿಗೆ 3667 ಎಕರೆ ಭೂಮಿಯನ್ನು ಉಳುಮೆ ಮಾಡಲು ನೀಡಬೇಕು. ನಗರದ ಜಂಬುನಾಥ ರಸ್ತೆಯಲ್ಲಿರುವ ನಿವೇಶನಗಳನ್ನು ಅರ್ಹರಿಗೆ ನೀಡಲು ವಾರ್ಡ್ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ತಹಸೀಲ್ದಾರ್ ವಿಶ್ವನಾಥಗೆ ಮನವಿ ಸಲ್ಲಿಸಲಾಯಿತು. ಸಿಪಿಎಂ ಕಾರ್ಯದರ್ಶಿ ಆರ್.ಭಾಸ್ಕರರೆಡ್ಡಿ, ಮುಖಂಡರಾದ ಎ.ಕರುಣಾನಿಧಿ, ಕೆ.ನಾಗರತ್ನ, ಎಂ.ಗೋಪಾಲ್, ವಿ.ಸ್ವಾಮಿ, ಎನ್.ಯಲ್ಲಾಲಿಂಗ, ಕೆ.ಎಂ.ಸ್ವಪ್ನಾ ಇತರರಿದ್ದರು.

Leave a Reply

Your email address will not be published. Required fields are marked *