More

    ವಿಜಯನಗರ ಜಿಲ್ಲೆಯಾದ್ಯಂತ ಉತ್ತಮ ಮಳೆ, ಜಲಮೂಲಗಳಿಗೆ ಕಳೆ

    ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಮಂಗಳವಾರ ಬೆಳಗಿನಜಾವ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆ ಅಬ್ಬರಿಸಿತು. ಸುಮಾರು ಮೂರು ಗಂಟೆ ಸುರಿದ ಮಳೆಯಿಂದಾಗಿ ಜಲಮೂಲಗಳಿಗೆ ಜೀವ ಕಳೆ ಬಂದಿದೆ.

    ಮಂಗಳವಾರ ಬೆಳಗ್ಗೆ ಎಂಟಕ್ಕೆ ಅಂತ್ಯಗೊಂಡಂತೆ ಜಿಲ್ಲೆಯ ಹೂವಿನಹಡಗಲಿಯಲ್ಲಿ 81.8 ಮಿ.ಮೀ. ಮಳೆಯಾದರೆ, ಹಗರಿಬೊಮ್ಮನಹಳ್ಳಿ 54.4 ಮಿ.ಮೀ., ಹೊಸಪೇಟೆ 12, ಕೂಡ್ಲಿಗಿ 6.2, ಹರಪನಹಳ್ಳಿ 58.2, ಕೊಟ್ಟೂರಿನಲ್ಲಿ 46.2 ಮಿಮೀ ಮಳೆ ದಾಖಲಾಗಿದೆ.

    ಹೂವಿನಹಡಗಲಿಯ ಕಾಯಕನಗರದ 30ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಸರ್ಕಾರಿ ಶಾಲೆಯಲ್ಲಿ ನಿವಾಸಿಗಳು ಆಶ್ರಯಪಡೆದಿದ್ದಾರೆ. ಕೊಟ್ಟೂರಿನಲ್ಲಿ ರಾಜಪ್ಪ ಎಂಬವರ ನಾಲ್ಕು ಕುರಿಗಳು ಸಿಡಿಲಿಗೆ ಸತ್ತಿವೆ.

    ಇದನ್ನೂ ಓದಿ: ಉತ್ತಮ ಮಳೆ-ಬೆಳೆಗಾಗಿ ದೇವರಿಗೆ ಉಡಿತುಂಬಿದ ರೈತರು

    ಇತ್ತೀಚೆಗೆ ಆಗೊಮ್ಮೆ- ಈಗೊಮ್ಮೆ ಉತ್ತಮ ಮಳೆಯಾಗುತ್ತಿದ್ದರಿಂದ ಜಲಮೂಲಗಳಿಗೆ ಜೀವ ಕಳೆ ಬಂದಿದೆ. ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಆರಂಭಗೊಂಡಿದ್ದರಿಂದ ಪ್ರತಿನಿತ್ಯ ಒಂದು ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದು ಬರುತ್ತಿದೆ. ಎಲ್ಲೆಡೆ ಅಂತರ್ಜಲಮಟ್ಟ ಹೆಚ್ಚುತ್ತಿದ್ದು, ಕಮಲಾಪುರ ಹೊರವಲಯದಲ್ಲಿ ಅಂತರ್ಜಲ ಕುಸಿತದಿಂದ ಬರಿದಾಗಿದ್ದ ಕೊಳವೆಬಾವಿಗಳಲ್ಲಿ ಜೀವಜಲ ಬೋರ್ಗರೆಯುತ್ತಿದೆ.

    ವಿದ್ಯುತ್ ಪಂಪ್ ಸಂಪರ್ಕವಿಲ್ಲದಿದ್ದರೂ ನೀರು ಉಕ್ಕುತ್ತಿದ್ದು, ಸ್ಥಳೀಯರನ್ನು ಬೆರಗಾಗಿಸಿದೆ. ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು 193 ಪುರುಷರು, 473 ಮಹಿಳೆಯರು ಸೇರಿದಂತೆ ಒಟ್ಟು 666 ಕೂಲಿ ಕಾರ್ಮಿಕರು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಮಂಗಳವಾರ ಬೆಳಗಿನಜಾವ ಸುರಿದ ಮಳೆಗೆ ಚೆಕ್‌ಡ್ಯಾಂನಲ್ಲಿ ನೀರು ಸಂಗ್ರಹವಾಗಿದೆ.

    ಮಳೆ ನೀರಿನಲ್ಲಿ ಹಂಪಿ ಬಿಂಬ

    ಹಂಪಿ ಪ್ರದೇಶದಲ್ಲೂ ಮಳೆ ಸುರಿದಿದ್ದು, ವಿಜಯ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನತೇರು ಸೇರಿದಂತೆ ವಿವಿಧ ಸ್ಮಾರಕಗಳ ಪ್ರತಿಬಿಂಬ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸ್ಮಾರಕಗಳ ಬಳಿ ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ಪ್ರತಿಬಿಂಬ ಬಿದ್ದಿದ್ದು, ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಪ್ರತಿಬಿಂಬದ ಬಳಿ ನಿಂತು ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

    ಬಾಳೆ ಬೆಳೆ, ಮನೆಗಳಿಗೆ ಹಾನಿ

    ಬಿರುಸಿನ ಮಳೆಯಿಂದಾಗಿ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ನೆಲಕ್ಕಚ್ಚಿದ್ದು, ರೈತರಿಗೆ ಲಕ್ಷಾಂತರ ರೂ. ಹಾನಿಯಾಗಿದೆ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ತಾಲೂಕು ತೋಟಗಾರಿಕೆ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು. ಹೂವಿನಹಡಗಲಿ ತಾಲೂಕಿನಲ್ಲಿ ನಾಲ್ಕು ಮನೆಗಳು ಹಾನಿಗೀಡಾಗಿವೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts