ಹೊಸಪೇಟೆ: ಪೂಜೆ ಮಾಡಿಸಿದರೆ ಲಕ್ಷಗಟ್ಟಲೆ ಹಣ ಬರುತ್ತದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪದ ಮೇರೆಗೆ ರಾಜಸ್ಥಾನ ಮೂಲದ ನಕಲಿ ಸ್ವಾಮಿ ಸೇರಿದಂತೆ ಮೂವರನ್ನು ನಗರದ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿ, 35 ಲಕ್ಷ ರೂ. ನಗದು ಮತ್ತು ನೋಟು ಎಣಿಕೆ ಯಂತ್ರ ವಶಪಡಿಸಿಕಳ್ಳಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದ ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್ (25), ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ (29) ಮತ್ತು ಶಂಕು ನಾಯ್ಕ (30) ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸರು ಕಾರ್ಯಾಚರಣೆ ಕೈಗೊಂಡು ಹೊಸಪೇಟೆ, ಚಿತ್ರದುರ್ಗದಲ್ಲಿ ಬಚ್ಚಿಟ್ಟಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇಂತಹ ಇನ್ನಷ್ಟು ಮೋಸ ಪ್ರಕರಣಗಳು ಬಯಲಿಗೆ ಬರಲಿವೆ. ಈ ತಂಡ ಸಂಡೂರು ಸೇರಿದಂತೆ ಇತರೆ ಭಾಗದಲ್ಲೂ ವಂಚನೆ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಹೆಚ್ಚಿನ ಪ್ರಮಾಣದ ನಗದು ಹಣ ಆರೋಪಿ ಬಳಿ ದೊರೆತಿದೆ ಎಂದು ಮಾಹಿತಿ ನೀಡಿದರು.
ಕಲ್ಲಹಳ್ಳಿ ಗ್ರಾಮದ ಕುಮಾರ ನಾಯ್ಕ ಎಂಬವರಿಗೆ ಅದೇ ಗ್ರಾಮದ ತುಕ್ಯಾ ನಾಯ್ಕ ಮತ್ತು ಶಂಕು ನಾಯ್ಕ ಎಂಬವರು ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್ ಎಂಬ ನಕಲಿ ಸ್ವಾಮಿಯನ್ನು ಸೆ.4ರಂದು ಪರಿಚಯಿಸಿದ್ದಾರೆ. 7.50 ಲಕ್ಷ ಬಾಕ್ಸ್‌ನಲ್ಲಿಟ್ಟು ಪೂಜೆ ಮಾಡಿದರೆ. 80 ಲಕ್ಷ ರೂ. ಮಾಡಿಕೊಡುವುದಾಗಿ ನಂಬಿಸಿದ್ದಾರೆ. 7.50 ಲಕ್ಷ ರೂ. ನಗದು ಬಾಕ್ಸ್‌ನಲ್ಲಿ ಹಾಕಿಟ್ಟು ಪೂಜೆ ಮಾಡಿದ್ದಾರೆ. 168+2 ದಿನಗಳ ನಂತರ ಬಾಕ್ಸ್ ಬಿಚ್ಚುವಂತೇ ಹೇಳಿ ಹೋಗಿದ್ದಾರೆ. ಇದೇ ತಂಡ ಕಲ್ಲಹಳ್ಳಿ ಗ್ರಾಮದ ರಾಜಾ ನಾಯ್ಕ ಎಂಬವರ ಮನೆಯಲ್ಲೂ ಸೆ.7ರಂದು ಪೂಜೆ ಸಲ್ಲಿಸಲು ಬಂದಿದೆ. ಈ ತಂಡ ನಡೆಸುವ ಪೂಜೆ ಸುಳ್ಳು ಎಂಬುದು ಅನುಮಾನ ಬಂದು, ಕುಮಾರ ನಾಯ್ಕ ತನ್ನ ಮನೆಯಲ್ಲಿದ್ದ ಬಾಕ್ಸ್ ತೆರೆದರೆ, ಬಾಕ್ಸ್‌ನಲ್ಲಿ ಊದುಬತ್ತಿ ಪ್ಯಾಕೇಟ್‌ಗಳು, ಉಸುಕಿನ ಚೀಲ, ಮೂರು ಟವೆಲ್‌ಗಳು ಮಾತ್ರ ಇವೆ. ಮೋಸ ಹೋಗಿರುವುದು ಗೊತ್ತಾದ ತಕ್ಷಣ, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಟಿ. ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಪಿಐ ಗುರುರಾಜ್ ಕಟ್ಟಿಮನಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಎಚ್. ನಾಗರತ್ನ, ಜಯಲಕ್ಷ್ಮಿ, ಸಿಬ್ಬಂದಿಯವರಾದ ಕೀಮ್ಯಾ ನಾಯ್ಕ, ಮೋತಿ ನಾಯ್ಕ, ಆರ್. ವೆಂಕಟೇಶ್, ಪರಮೇಶ್ವರಪ್ಪ, ಮಂಜುನಾಥ ಮೇಟಿ, ಚಂದ್ರಶೇಖರ್, ವಿ. ರಾಘವೇಂದ್ರ, ಹೊನ್ನೂರಪ್ಪ, ಸಣ್ಣ ಗಾಳೆಪ್ಪ, ಅಡಿವೆಪ್ಪ, ಚಂದ್ರಪ್ಪ, ಎಂ. ಸಂತೋಷ್‌ಕುಮಾರ, ನಾಗರಾಜ ಬಂಡಿಮೇಗಳ, ಜಗದೀಶ್, ಗೋಪಿ ನಾಯ್ಕ, ವಿರೇಶ್, ಜಿ. ನಾಗರಾಜ್ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.