ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಡಿವೈಎಫ್‌ಐ ಪದಾಧಿಕಾರಿಗಳ ಪ್ರತಿಭಟನೆ

ಹೊಸಪೇಟೆ: ನಗರದ ಅಶ್ವತ್ಥ ನಾರಾಯಣ ಕಟ್ಟೆಯಿಂದ ಉಕ್ಕಡಕೇರಿಯ ಗರಡಿಮನೆಯವರೆಗೆ ಸಂಪೂರ್ಣ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ನಗರಸಭೆ ಕಚೇರಿ ಮುಂದೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ) ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ ಮಾತನಾಡಿ, ರಸ್ತೆ ಹಾಳಾಗಿದ್ದು, ಅಕ್ಕಪಕ್ಕದ ನಿವಾಸಿಗಳು ಧೂಳಿನಿಂದ ಅಸ್ತಮಾ, ಕೆಮ್ಮು, ಕಣ್ಣುರಿ, ಚರ್ಮರೋಗದಂಥ ಅನೇಕ ಕಾಯಿಲೆಗಳಿಂದ ನರಳುವಂತಾಗಿದೆ. ಈ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತಂದರೂ ಪ್ರಯೋಜನವಾಗಿಲ್ಲ. ಈಗಾದರೂ ಕ್ರಮಕೈಗೊಳ್ಳಬೇಕು. ನಿರ್ಲಕ್ಷೃವಹಿಸಿದರೆ ಅ.2ರಂದು ನಗರಸಭೆ ಕಚೇರಿ ಮುಂದೆ ನಿರಶನ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಕಾರ್ಯದರ್ಶಿ ಕಲ್ಯಾಣಯ್ಯ ಮಾತನಾಡಿ, ನಗರಸಭೆ ವಾಹನಗಳಲ್ಲಿ ಸ್ವಚ್ಛತೆ, ಆರೋಗ್ಯ ಕಾಳಜಿ ಕುರಿತು ನಿತ್ಯ ಪ್ರಚಾರ ಮಾಡುತ್ತಿದ್ದರೂ, ಹದಗೆಟ್ಟ ರಸ್ತೆಗಳನ್ನು ನೋಡುತ್ತಿಲ್ಲ. ನಿರಂತರ ಶುದ್ಧ ಕುಡಿವ ನೀರಿನ ಯೋಜನೆ ಮತ್ತು ಯುಜಿಡಿ ಕಾಮಗಾರಿಗೆ ರಸ್ತೆಗಳನ್ನು ಅಗೆದಿದ್ದು, ಅವುಗಳ ದುರಸ್ತಿಗೆ ಮುಂದಾಗಿಲ್ಲ. ಹೀಗಾಗಿ, ಏಳು ಕೇರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಬಳಿಕ ನಗರಸಭೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ತಾಲೂಕು ಅಧ್ಯಕ್ಷ ಕಿನ್ನಾಳ ಹನುಮಂತ, ಖಜಾಂಚಿ ಈ.ಮಂಜುನಾಥ, ಉಪಾಧ್ಯಕ್ಷ ಬಂಡೆ ತಿರುಕಪ್ಪ, ಸಹಕಾರ್ಯದರ್ಶಿ ಹನುಮಾನಾಯ್ಕ, ರಾಜ ಚಂದ್ರಶೇಖರ, ರವಿಕುಮಾರ್, ದಿವಾಕರ್, ವಿಜಯಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *