ಹೊಸಪೇಟೆ: ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಲು ಹಾಗೂ ಪ್ರಕರಣಗಳ ಇಳಿಮುಖಕ್ಕಾಗಿ ಪೊಲೀಸ್ ಇಲಾಖೆಯು ಶ್ರಮವಹಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ್.ಎ.ನಂದಗಡಿ ಹೇಳಿದರು.
ಜು.13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ನಗರದ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಪೊಲೀಸರ ಪಾತ್ರ ಮೊದಲಾಗಿದ್ದು, ನಂತರದಲ್ಲಿ ನ್ಯಾಯಾಂಗ ಇಲಾಖೆಯ ಪಾತ್ರ ಇರುತ್ತದೆ. ಹಾಗಾಗಿ ಪೊಲೀಸರು ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ದೇಶದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ಪುನರ್ ರಚನೆ ಮಾಡಲಾಗಿದೆ. ಹಾಗಾಗಿ ಪೊಲೀಸ್ ಇಲಾಖೆಗೆ ಕಷ್ಟವಾಗುವುದಿಲ್ಲಾ ಎಂದರು.
ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸೂಚನೆಗಳನ್ನು ಪಾಲಿಸಿ ಹೆಚ್ಚು ಪೊಲೀಸ್ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಶ್ರಮವಹಿಸಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಜಿಲ್ಲೆಯು 4ನೇ ಸ್ಥಾನದಲ್ಲಿದೆ ಎಂದರು.
ನ್ಯಾಯಾಧೀಶರಾದ ಪ್ರಶಾಂತ ನಾಗಲಾಪುರ, ಹೇಮಲತಾ ಬಿ.ಹುಲ್ಲೂರು, ರಮೇಶ್ ಬಾಬು ಬಿ.ಎನ್., ಅಶೋಕ ಆರ್.ಎಚ್., ಸಂಜೀವಕುಮಾ ಜಿ., ಚೈತ್ರ.ಜೆ., ಸಹಾಯಕ ಅಭಿಯೋಜಕ ರೇವಣಸಿದ್ದಪ್ಪ, ಎಎಸ್ಪಿ ಸಲೀಂ ಪಾಷಾ, ತಾಲೂಕು ಕಾನೂನು ಸೇವಾ ಸಮಿತಿಯ ಸಹಾಯಕ ಎಸ್.ಬಿ.ಕಮತಗಿ ಇತರರಿದ್ದರು.