ಹೊಸಪೇಟೆ: ಇಲ್ಲಿನ ನಗರಸಭೆಯ ನಾಮನಿರ್ದೇಶಿತ ಸದಸ್ಯ ಬಿ.ಮೌಲಾಲಿ ಮೇಲೆ ಹಲ್ಲೆಯಾಗಿದೆ ಎಂದು ನಗರದ ಚಿತ್ತವಾಡ್ಗಿ ಪೋಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಆರೋಪಿ ನಾಗರಾಜ ಎಂಬವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಮೇ.28ರಂದು ರಾತ್ರಿ ನಗರದ ಚಿತ್ತವಾಡ್ಗಿಯಲ್ಲಿ ಬಿ.ಮೌಲಾಲಿ ಮನೆಯ ಬಳಿ ಕಾರಿನಲ್ಲಿ ಹೋಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೌಲಾಲಿ ಕಳೆದ ಏ.4ರಂದು ಚಿತ್ತವಾಡ್ಗಿಯ ಶಾದಿಮಹಲ್‌ನಿಂದ ರೆಹಮತ್ ನಗರದ ರೈಲ್ವೇ ಗೇಟ್‌ವರೆಗೆ ನಡೆಯುತ್ತಿರುವ ಫುಟ್ ಪಾತ್ ಕಾಮಗಾರಿ ಕಳಪೆಯಾಗಿರುವ ಕುರಿತು ನಗರಸಭೆ, ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಾಗರಾಜ ಮನವಿಯನ್ನು ವಾಪಸ್ ಪಡೆಯುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.