ಹೊಸಪೇಟೆ: ತಾಲೂಕಿನ ಕಾಕುಬಾಳು ಬೆಟ್ಟದಲ್ಲಿ ಆದಿಮಾನವ ಕಾಲದ ಗವಿ ಚಿತ್ರಗಳು ಪತ್ತೆಯಾಗಿದ್ದು, ತೆಕ್ಕಲುಕೋಟೆಯ ಇತಿಹಾಸ ಸಂಶೋಧನಾರ್ಥಿ ಎಚ್.ಕಾಡಸಿದ್ದ ಅವರ ತಂಡ ಗಂಗಾವತಿ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಮಾರ್ಗದರ್ಶನದಲ್ಲಿ ಸಂಶೋಧಿಸಿದ್ದಾರೆ.
ತಾಲೂಕಿನ ಕಾಕುಬಾಳು ಬಳಿ ಯಂಕಪ್ಪ ತಾತನ ಗವಿಯಲ್ಲಿ ಪ್ರಾಗ್ಯೆತಿಹಾಸಿಕ ಕಾಲದ ಚಿತ್ರಗಳಿವೆ. ಒಂದು ಗವಿಯಲ್ಲಿ ಬೃಹತ್ ಜಿಂಕೆ ಚಿತ್ರ ಮತ್ತೊಂದು ಗವಿಯಲ್ಲಿ ಆದಿಮಾನವ ಧಾನ್ಯ ಸಾಗಿಸುವ ರೀತಿಯಲ್ಲಿ ವರ್ಣ ಚಿತ್ರಗಳಿವೆ. ಜಿಂಕೆ ಚಿತ್ರವು ಕೆಂಪು ವರ್ಣದಲ್ಲಿದ್ದು ತಾಯಿ ಮತ್ತು ಮರಿ ಜಿಂಕೆಗಳಿವೆ. ತಾಯಿ ಜಿಂಕೆಯ ಮುಂಡ ನೀಳವಾಗಿದ್ದು ಮಧ್ಯದಲ್ಲಿ ಅಡ್ಡ ರೇಖೆಯನ್ನು ಹಾಕಿ ಜಿಂಕೆಯ ಒಂದು ಪ್ರಭೇದವನ್ನು ಸೂಚಿಸಲಾಗಿದೆ.
ಮರಿಜಿಂಕೆ ತಲೆಯನ್ನು ಎತ್ತರಿಸಿ ನಿಂತಿದ್ದು ಅದರ ದೈಹಿಕ ವಿನ್ಯಾಸ ವಿಶೇಷವಾಗಿದೆ. ಕೆಳಭಾಗದಲ್ಲಿ ಸಂಚಾರಕ್ಕಾಗಿ ಎಂಥದೋ ಸಾಧನ ಬಳಸಿರುವುದು ವ್ಯಕ್ತವಾಗುತ್ತದೆ. ಮಾನವನು ನಾಗರಿಕತೆ ಪಥದಲ್ಲಿ ಮುಂದೆ ಮುಂದೆ ಹೆಜ್ಜೆ ಹಾಕಿದಂತೆ ಅವನು ಜೀವನದಲ್ಲೂ ಸಹ ಅನೇಕ ಗಮನಾರ್ಹವಾದ ಸುಧಾರಣೆ ಕಂಡು ಬಂದವು. ಆದಿಮಾನವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಾಲು ನಡಿಗೆಯಲ್ಲಿಯೇ ಸಾಗುತ್ತಿದ್ದರು. ನಂತರ ಕ್ರಮವಾಗಿ ಜನರು ಸಾರಿಗೆಗಾಗಿ ಪ್ರಾಣಿಗಳನ್ನು ಬಳಸಿಕೊಂಡು ಪ್ರಯಾಣ ಮಾಡುವುದನ್ನು ಕಲಿತಿದ್ದರು ಎನ್ನುವುದು ಈ ವರ್ಣಚಿತ್ರಗಳ ಮೂಲಕ ತಿಳಿಯ ಬಹುದು.
ಶೋಧನೆಗೆ ಪಂಪಾಪತಿ ಹಡಪದ, ಶಿವಪ್ಪ ಏಳು ಕುರಿ, ರವಿ, ಹಡಪದ್ ಸಿದ್ದ ಹಡಪದ್ ಉಮೇಶ, ವಿ.ಶರಣ, ತಿಪ್ಪಯ್ಯ ಸಹರಿಸಿದ್ದಾರೆ.