ಸರ್ವಧರ್ಮ ಸಮನ್ವಯತೆಯಿಂದ ಅಭಿವೃದ್ಧಿ – ಶ್ರೀ ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಡಾ.ಶ್ರೀ ಸಂಗನಬಸವ ಸ್ವಾಮೀಜಿ ಅಭಿಮತ

ಹೊಸಪೇಟೆಯಲ್ಲಿ 1,111 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ |ವಿವಿಧ ಮಠಾಧೀಶರು ಭಾಗಿ, ರಥೋತ್ಸವ ಅದ್ದೂರಿ

ಹೊಸಪೇಟೆ: ಸರ್ವಧರ್ಮ ಸಮನ್ವಯತೆ ಇದ್ದರೆ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶ್ರೀ ಕೊಟ್ಟೂರುಸ್ವಾಮಿ ಮಠದ ಜಗದ್ಗರು ಡಾ.ಶ್ರೀ ಸಂಗನಬಸವ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಕೊಟ್ಟೂರು ಸ್ವಾಮಿ ಮಠದಲ್ಲಿ ಸರ್ವಧರ್ಮ ಸಮನ್ವಯತೆ ರಥೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ 1,111 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರಕೃತಿ ನಾಶದಿಂದ ಮಳೆ ಕೊರತೆಯಾಗಿ ಸಕಲ ಜೀವರಾಶಿಗಳಿಗೆ ಕುಡಿವ ನೀರಿಗೆ ತೊಂದರೆಯಾಗಿದೆ. ಹೀಗಾಗಿ, ಪ್ರಕೃತಿ ಸಮತೋಲನಕ್ಕಾಗಿ ಸರ್ವ ಧರ್ಮದವರಿಗೂ ಉಡಿ ತುಂಬುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪ್ರಕೃತಿ ನಾಶದಿಂದ ಅನೇಕ ತೊಂದರೆಯಾಗುತ್ತಿದ್ದರೂ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ.

ಪಶ್ಚಿಮಘಟ್ಟದ ಗಿರಿ ಸಾಲುಗಳ ಸಮೃದ್ಧಿಯಿಂದ ಮಳೆ ಉತ್ತಮವಾಗಿ ಸುರಿಯುತ್ತಿತ್ತು. ಈಗ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುತ್ತಿರುವ ಪ್ರಕೃತಿ ನಾಶಕ್ಕೆ ಕಾರಣವಾಗಲಿದೆ. ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ವಿವಿಧ ಸ್ವಾಮೀಜಿಗಳು ಸೇರಿ ಸಾರ್ವಜನಿಕರು ವಿರೋಧಿಸಿ ಹೋರಾಟ ನಡೆಸಿದ್ದರಿಂದ ಸರ್ಕಾರದ ನಿರ್ಧಾರ ಬದಲಾಯಿತು. ಗುಡ್ಡಗಳನ್ನು ದತ್ತು ಪಡೆದು ಗಿಡ, ಮರಗಳನ್ನು ನೆಟ್ಟು ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗ್ರಂಥಗಳಿಂದ ಧರ್ಮ ಎಂಬ ಪದ ತೆಗೆದರೆ ಉಳಿದಿದ್ದೆಲ್ಲ ಕೇವಲ ಕಾಗದವಾಗುತ್ತದೆ. ಧರ್ಮ ಎಂಬ ಪದವೇ ನಮ್ಮ ದೇಶದ ಸಂಸ್ಕೃತಿ, ಭಾವೈಕ್ಯತೆ, ಸಾಮರಸ್ಯವನ್ನು ಬೆಸೆಯುತ್ತದೆ. ಪ್ರಪಂಚದಲ್ಲಿ ಹೆಣ್ಣಿಲ್ಲದಿದ್ದರೆ ಶೂನ್ಯವೆಂದೇ ಭಾವಿಸಬಹುದು. ಹೆಣ್ಣನ್ನು ಪೂಜ್ಯನೀಯ ಭಾವನೆಯಿಂದ ಗೌರವಿಸುವ ದೇಶ ನಮ್ಮದು. ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂತ ತಾಯಿಯೇ ಶ್ರೇಷ್ಠ ಎನ್ನುವುದು ಎಲ್ಲರೂ ಅರಿಯಬೇಕಿದೆ ಎಂದು ತಿಳಿಸಿದರು.

ಹಿರೇಮಲ್ಲನಕೆರೆ ಶ್ರೀ ಚನ್ನಬಸವ ಸ್ವಾಮೀಜಿ, ಬಾಗಲಕೋಟೆ ಅಕ್ಕನಬಳಗದ ಅಧ್ಯಕ್ಷೆ ನಿರ್ಮಲಾ ವೀರಣ್ಣ ಹಲಕುರ್ಕಿ, ಹುನಗುಂದದ ದೊಡ್ಡಮ್ಮ ಹವಾಲ್ದಾರ್ ಮಾತನಾಡಿದರು. ವಳಬಳ್ಳಾರಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರ ಶಾಂತಮಲ್ಲ ಸ್ವಾಮೀಜಿ, ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ದರೂರಿನ ಶ್ರೀ ಕೊಟ್ಟೂರು ದೇಶಿಕರು ಸೇರಿ ವಿವಿಧ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಅಕ್ಕನಬಳಗದ ಗದಗ ಪ್ರೇಮಾ ಮೇಟಿ, ಕೊಪ್ಪಳದ ಕೋಮಲಾ ಕುದುರಿಮೋತಿ, ಬಾದಾಮಿ ನಾಗರತ್ನಮ್ಮ ಪಟ್ಟಣದ, ಹೊಸಪೇಟೆ ಅರುಣಾ ಶಿವಾನಂದ ಇತರರಿದ್ದರು.

ಸರ್ವಧರ್ಮದ 1,111 ಮುತ್ತೈದೆಯರಿಗೆ ಸಾಮೂಹಿಕವಾಗಿ ಉಡಿ ತುಂಬಲಾಯಿತು. ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಥಿಯೋಸೋಪಿಕಲ್ ಮಹಿಳಾ ಕಾಲೇಜಿನ ಗ್ರಂಥಪಾಲಕಿ ಡಿ.ಎನ್.ಸುಜಾತಾ ರೇವಣಸಿದ್ದಪ್ಪ, ರಾಣಿ ಚನ್ನಮ್ಮ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎಸ್.ಶರಣಯ್ಯ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *