ಹೊಸದುರ್ಗ: ಪಟ್ಟಣದಲ್ಲಿ ಸೋಮವಾರ ಸಿಲಿಂಡರ್ ಸೋರಿಕೆಯಿಂದ ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆಗೆ ಅಧಿಕಾರಿಗಳ ವೈಫಲ್ಯ ಕಾರಣ ಎನ್ನಲಾಗಿದೆ.
ಪುರಸಭೆಗೆ ಸೇರಿದ ಪಟ್ಟಣದ ಮಧ್ಯಂತರ ಪಂಪ್‌ಹೌಸ್ ಆವರಣದಲ್ಲಿ ಕ್ಲೋರಿನ್‌ಯುಕ್ತ ಸಿಲಿಂಡರ್ ಅನುಪಯುಕ್ತವಾಗಿ ಬಿದ್ದಿತ್ತು. ಕಳೆದ 10 ವರ್ಷಗಳಿಂದ ಇಲ್ಲಿ ಬಿದ್ದಿದ್ದ ಸಿಲಿಂಡರ್‌ಗಳ ನಿರ್ವಹಣೆಯ ಹೊಣೆಯನ್ನು ಅಧಿಕಾರಿಗಳು ಕೈಚೆಲ್ಲಿದ್ದಾದರೂ ಏಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸರ್ಕಾರದ ಹಣ ಖರ್ಚು ಮಾಡಿ ತಂದ ಸಿಲಿಂಡರ್‌ಗಳು ಜನರ ಉಪಯೋಗಕ್ಕೆ ಬಳಕೆಯಾಗದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಮಂಗಳವಾರ ಬಡಾವಣೆಗೆ ಭೇಟಿ ನೀಡಿದ ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್ ನೇತೃತ್ವದ ತಂಡ ಜನರ ಆರೋಗ್ಯ ಪರೀಕ್ಷೆ ನಡೆಸಿತು. ಗಂಭೀರವಾದ ಸಮಸ್ಯೆ ಕಂಡುಬಂದಿಲ್ಲವಾದರೂ ಜನರು ಸೋಮವಾರದ ಶಾಕ್‌ನಿಂದ ಹೊರಬಂದಿಲ್ಲ.
ಪುರಸಭೆ ಆಡಳಿತ ಹಾಗೂ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅನಿಲ ಸಿಲಿಂಡರ್ ನಿರ್ವಹಿಸುವ ತಂತ್ರಜ್ಞರನ್ನು ಸ್ಥಳಕ್ಕೆ ಕರೆಸಿ ಎರಡು ಸಿಲಿಂಡರ್‌ಗಳನ್ನು ಪಟ್ಟಣದ ಹೊರವಲಯಕ್ಕೆ ತೆಗೆದುಕೊಂಡು ಹೋಗಿ ನಿಷ್ಕ್ರಿಯಗೊಳಿಸಲಾಗಿದೆ. ಕೆಲಸ ನಿಲ್ಲಿಸಿದ್ದ ಪಂಪ್‌ಹೌಸ್
ಕೆಲ್ಲೋಡು ಸಮೀಪದ ವೇದಾವತಿ ನದಿಯಿಂದ ಬಂದ ನೀರನ್ನು ಎಪಿಎಂಸಿ ಮಾರುಕಟ್ಟೆ ಮುಂಭಾಗದ ಮಧ್ಯಂತರ ಪಂಪ್‌ಹೌಸ್‌ನಲ್ಲಿ ಶುದ್ಧೀಕರಿಸಿ ಪಟ್ಟಣದ ಮನೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಶುದ್ಧೀಕರಣ ಘಟಕದ ನಿರ್ವಹಣೆಯ ಹೊಣೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೇಲಿತ್ತು.
2014 ರಲ್ಲಿ ನೀರು ಶುದ್ಧೀಕರಣಕ್ಕೆ ಬಳಸಲು 1.5 ಟನ್ ತೂಕದ ಎರಡು ಕ್ಲೋರಿನ್ ಟಾಕ್ಸಿಕ್ ಅನಿಲ ತುಂಬಿದ ಸಿಲಿಂಡರ್‌ಗಳನ್ನು ಪಂಪ್‌ಹೌಸ್‌ಗೆ ನೀಡಲಾಗಿತ್ತು. ಇವು ಬಳಕೆಯಾಗದೇ ಪಂಪ್‌ಹೌಸ್‌ನ ಆವರಣದಲ್ಲಿ ಅನಾಥವಾಗಿ ಬಿದ್ದಿದ್ದವು.
ಕೆಲ್ಲೋಡು ಬ್ಯಾರೇಜ್ ಪಂಪ್‌ಹೌಸ್‌ನಿಂದ ಪಟ್ಟಣಕ್ಕೆ ನೇರವಾಗಿ ನೀರು ಸರಬರಾಜು ಶುರುವಾದ ನಂತರ, ಸುಮಾರು 8 ವರ್ಷಗಳಿಂದ ಮಧ್ಯಂತರ ನೀರು ಸರಬರಾಜು ಕೇಂದ್ರ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಆಮೇಲೆ ಅಲ್ಲಿ ಸಾರ್ವಜನಿಕ ಉದ್ಯಾನ ನಿರ್ಮಿಸಲಾಯಿತು. ಮಕ್ಕಳು ಅಲ್ಲಿ ಆಟವಾಡುತ್ತಿದ್ದರು. ಪಾರ್ಕ್‌ನ ಪಕ್ಕದ ಖಾಲಿ ಜಾಗದಲ್ಲಿ ಬಿದ್ದಿದ್ದ ಸಿಲಿಂಡರ್‌ಗಳನ್ನು ಸೋಮವಾರ ಹಳೇ ಕಬ್ಬಿಣ, ಗುಜರಿ ವಸ್ತುಗಳನ್ನು ಸಂಗ್ರಹಿಸುವವರು ಬಂದು ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿದಾಗ ಸೋರಿಕೆಯಾಗಿದೆ ಎನ್ನಲಾಗಿದೆ.
ಸುಮಾರು 9 ಕ್ವಿಂಟಾಲ್ ಕ್ಲೋರಿನ್ ಟಾಕ್ಸಿನ್ ಸೋರಿಕೆಯಿಂದ ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಜನರು ಉಸಿರಾಟದ ಸಮಸ್ಯೆ, ವಾಕರಿಕೆ, ಗಂಟಲು ಹಾಗೂ ಕಣ್ಣು ಉರಿಗೆ ಸಿಲುಕಿದರು. ಅನೇಕರು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರಿಂದ ಪರಿಸ್ಥಿತಿ ಚಿಂತಾಜನಕವಾಗಿತ್ತು.