ಸುಗ್ಗೇನಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸಲು ಪಟ್ಟು

ಹೊಸಪೇಟೆ ಸಾರಿಗೆ ಕಚೇರಿ ಮುಂದೆ ಎಸ್‌ಎಫ್‌ಐ ಪ್ರತಿಭಟನೆ

ಹೊಸಪೇಟೆ: ಸುಗ್ಗೇನಹಳ್ಳಿಯಿಂದ ನಗರದ ಶಾಲಾ, ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಹಾಗೂ ಇತರ ಕೆಲಸಗಳಿಗೆ ಸಾರ್ವಜನಿಕರು ಬರುತ್ತಿದ್ದರಿಂದ ನಿತ್ಯ ಎರಡು ಸಾರಿಗೆ ಬಸ್ ಓಡಿಸುವಂತೆ ಆಗ್ರಹಿಸಿ ನಗರದ ಎನ್‌ಇಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಜೆ.ಶಿವಕುಮಾರ ಮಾತನಾಡಿ, ಸುಗ್ಗೇನಹಳ್ಳಿಯ ವಿದ್ಯಾರ್ಥಿಗಳು ಮತ್ತು ಜನತೆಗಾಗುವ ಸಮಸ್ಯೆ ಕುರಿತು ಮೂರ‌್ನಾಲ್ಕು ವರ್ಷದಿಂದ ನಿಗಮದ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ. ಅಲ್ಲದೆ, ಬಡವರು ಖಾಸಗಿ ವಾಹನಗಳಲ್ಲಿ ಹೆಚ್ಚಿನ ಹಣ ನೀಡಿ ಶಾಲಾ, ಕಾಲೇಜುಗಳಿಗೆ ಬರುವಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳುವ ಅಪಾಯವಿದೆ. ಒಂದು ವಾರದೊಳಗೆ ಸುಗ್ಗೇನಹಳ್ಳಿಯಿಂದ ನಗರಕ್ಕೆ ಎರಡು ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ಮಾರುತಿ ಮಾತನಾಡಿ, ಎನ್‌ಇಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಸಾರಿಗೆ ಬಸ್ ಸಂಚಾರದಿಂದ ವಿದ್ಯಾರ್ಥಿಗಳು ಪಾಸ್ ಪಡೆದು ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಪೂರೈಸಲು ಅನುಕೂಲವಾಗಲಿದೆ. ಕೂಡಲೇ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಗರದ ಶ್ರಮಿಕ ಭವನದಿಂದ ಎನ್‌ಇಕೆಸ್ಸಾರ್ಟಿಸಿ ಬಸ್ ನಿಲ್ದಾಣದವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ರ‌್ಯಾಲಿ ನಡೆಸಿದರು. ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಮಹೇಶ್, ಸಿಂಧಗೇರಿ ನಾಗರಾಜ, ಅಜ್ಜಯ್ಯ, ಕಾವೇರಿ, ನವೀನ್ ಕುಮಾರ್, ಅಶ್ವಿನಿ, ಈಶ್ವರಮ್ಮ, ಹನುಮಂತಮ್ಮ, ಪ್ರಿಯಾಂಕಾ, ಉಮಾದೇವಿ, ಕವಿತಾ, ಅನಿತಾ ಇತರರಿದ್ದರು.

Leave a Reply

Your email address will not be published. Required fields are marked *