ಅನ್ನದಾತರ ಆಕ್ರೋಶಕ್ಕೆ 5 ತಾಸು ಎನ್‌ಎಚ್ ಸಂಚಾರ ಬಂದ್

ವಾಹನ ಸವಾರರು, ಪ್ರಯಾಣಿಕರ ಪರದಾಟ | ಪೊಲೀಸ್ ಬಿಗಿ ಬಂದೋಬಸ್ತ್

ಹೊಸಪೇಟೆ: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಟಿಬಿ ಡ್ಯಾಂ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ಸೋಮವಾರ 5 ತಾಸು ಸಂಚಾರ ತಡೆ ನಡೆಯಿತು.

ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ನವೀಕರಣ ಕಾಮಗಾರಿ, ಜಿಂದಾಲ್‌ಗೆ 3,666 ಎಕರೆ ಭೂಮಿ ಕ್ರಯ ಮಾಡಿಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಮುಖಂಡರು ಖಂಡಿಸಿದರು. ಟಿಬಿ ಡ್ಯಾಂ ಬಳಿಯ ಗಣೇಶ ದೇವಸ್ಥಾನ ಸಮೀಪ ರಸ್ತೆಯಲ್ಲೇ ಶಾಮೀಯಾನ ಹಾಕಿ ಬೈಕ್, ಟ್ರಾಕ್ಸ್‌ಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿತ್ತು. ಸಂಚಾರ ಸ್ಥಗಿತವಾಗಿದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತೀರಾ ತೊಂದರೆ ಅನುಭವಿಸಿದರು. ಮಹಿಳೆಯರು, ಮಕ್ಕಳು ಬಿಸಿಲಲ್ಲೇ ನಿಂತಿದ್ದರು. ನಗರದ ಸಾಯಿಬಾಬಾ ದೇವಸ್ಥಾನ, ಟಿಬಿಡ್ಯಾಂ, ಶ್ರೀ ಶನೈಶ್ಚರ ದೇವಸ್ಥಾನದ ಬಳಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ತಡೆಯಲಾಗಿತ್ತು. ಪ್ರಯಾಣಿಕರು ಕಾಲ್ನಡಿಗೆಯಲ್ಲೇ ತೆರಳಿದರು. ಕೊಪ್ಪಳ ಜಿಲ್ಲೆ ಶಿವಪುರದಿಂದ ನಗರದ ಟಿಬಿ ಡ್ಯಾಂ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಮದುವೆ ಕಾರ್ಯಕ್ಕೆ ಟ್ರಾೃಕ್ಟರ್‌ನಲ್ಲಿ ತೆರಳುತ್ತಿದ್ದವರಿಗೂ ಬಂದ್ ಬಿಸಿ ತಟ್ಟಿತು. ಕೆಲವರು ಕಾದು ಕಾದು ಸುಸ್ತಾದರು. ವೃದ್ಧರು, ಮಕ್ಕಳು ಗಂಟು, ಮೂಟೆ ಹೊತ್ತು ಬಿಸಿಲಲ್ಲೇ ಹೆಜ್ಜೆ ಹಾಕುತ್ತಿದ್ದರು.

ಎಸಿ ಪಿ.ಎನ್.ಲೋಕೇಶ್‌ಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಕಾರ್ತಿಕ್, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ನಾರಾಯಣ ರೆಡ್ಡಿ, ಮುಖಂಡರಾದ ಶಂಕರ್‌ದಾಸ್, ಸುರೇಶ್, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ನಗರ ಘಟಕದ ಅಧ್ಯಕ್ಷ ಕೆ.ಸುರೇಶ್, ಮುಖಂಡಾದ ಬಿ.ವಿ.ಗೌಡ, ಚಲ್ಲಾ ವೆಂಕಟನಾಯ್ಡು, ಬಿ.ಟಿ.ನಾಗರಾಜ, ತಾಲೂಕು ಉಪಾಧ್ಯಕ್ಷರಾದ ಚಿನ್ನದೊರೆ, ಮಧುಸೂದನ್, ಹೇಮರೆಡ್ಡಿ, ಎಲ್.ಎಸ್.ರುದ್ರಪ್ಪ, ರಾಘವೇಂದ್ರ ಸೇರಿ ನೂರಾರು ರೈತರು ಇದ್ದರು.

Leave a Reply

Your email address will not be published. Required fields are marked *