ಮಹಾರಾಷ್ಟ್ರ ಪ್ರವಾಸಿಗನ ಬುಲೆಟ್‌ ಬೈಕ್​ನಲ್ಲಿ ಅರಳಿದ ಹಂಪಿ ಕಲಾ ವೈಭವ!

ಹೊಸಪೇಟೆ: ಐತಿಹಾಸಿಕ ಹಂಪಿಯ ಶಿಲ್ಪಕಲೆಗೆ ಎಂಥವರನ್ನೂ ತನ್ನತ್ತ ಸೆಳೆಯುವ ಶಕ್ತಿಯಿದೆ. ಅದೇ ರೀತಿ ಪ್ರವಾಸಿ, ಮಹಾರಾಷ್ಟ್ರದ ಪುಣೆಯ ನಿವಾಸಿ ಗಣೇಶ ಶಿಂಧೆ ತಮ್ಮ ದೇಶ ಪರ್ಯಟನೆಗೆ ಬಳಸುವ ಬುಲೆಟ್ (ಬೈಕ್)ನ ಮೇಲೆ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಸ್ಮಾರಕಗಳ ಚಿತ್ರಗಳನ್ನು ಬಿಡಿಸಿ ಹಂಪಿಯ ಸೊಬಗು ಪ್ರಚುರಪಡಿಸುತ್ತಿದ್ದಾರೆ.

ಈಗಿನ ಯುವ ಸಮೂಹ ತಮ್ಮ ನೆಚ್ಚಿನ ಬೈಕ್‌ಗಳನ್ನು ತಮ್ಮ ಆಲೋಚನೆಯಂತೆ ಸಿಂಗರಿಸುತ್ತಾರೆ. ತನ್ನೂರಿನಿಂದ ಬುಲೆಟ್‌ನಲ್ಲಿ ಹಂಪಿಗೆ ಆಗಮಿಸಿದ ಗಣೇಶ ಶಿಂಧೆ ಇಲ್ಲಿನ ಶಿಲ್ಪಕಲೆಯ ಸ್ಮಾರಕಗಳನ್ನು ಬೈಕ್‌ನ ವಿವಿಧ ಭಾಗದಲ್ಲಿ ಬಿಡಿಸುವ ಮೂಲಕ ನೋಡುಗರು ಹುಬ್ಬೇರುವಂತೆ ಮಾಡಿದ್ದಾರೆ. ಸೋಲೋ ರೈಡ್ ಹೊರಡುವ ಮೂಲಕ ವಿಶ್ವ ವಿಖ್ಯಾತ ತಾಣದ ಮಹತ್ವ ಸಾರುತ್ತಿದ್ದಾರೆ.

ಪುಣೆಯ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುವ ಗಣೇಶ್ ಶಿಂಧೆ, ಬಿಡುವಿನಲ್ಲಿ ಗೆಳೆಯನ ಜತೆ ಬೈಕ್‌ನಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ಕುಂಚ ಕಲಾವಿದ ಗಣೇಶ್ ಶಿಂಧೆ 2014 ರಲ್ಲಿ ಮೊದಲ ಬಾರಿಗೆ ಹಂಪಿಗೆ ಬಂದಾಗ ಸ್ಮಾರಕಗಳ ಸೌಂದರ್ಯಕ್ಕೆ ಮನಸೋತಿದ್ದರು. ಹೀಗಾಗಿ ಅವರು ಜೂ.6ರಂದು ಮತ್ತೆ ಹಂಪಿಗೆ ಆಗಮಿಸಿ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಸುತ್ತಾಡಿ ಬೈಕ್‌ನ ಟ್ಯಾಂಕ್, ಬ್ಯಾಟರಿ ಬಾಕ್ಸ್ ಸೇರಿ ವಿವಿಧ ಭಾಗದಲ್ಲಿ ಹಂಪಿಯ ಶಿಲ್ಪಕಲೆಯ ವೈಭವ ಮೂಡಿಸುತ್ತಿದ್ದಾರೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪರವಾನಗಿ ಪಡೆದಿರುವ ಗಣೇಶ್ ಶಿಂಧೆಯವರು ಅಕ್ರಾಲಿಕ್ ಬಣ್ಣದಿಂದ ತಮ್ಮ ಬುಲೆಟ್ ಪೆಟ್ರೋಲ್ ಟ್ಯಾಂಕ್‌ನ ಒಂದು ಭಾಗದಲ್ಲಿ ತಳವಾರಘಟ್ಟ ಪ್ರವೇಶದ್ವಾರ, ಮತ್ತೊಂದು ಭಾಗದಲ್ಲಿ ವಿಜಯವಿಠ್ಠಲ ದೇವಸ್ಥಾನದ ಪ್ರವೇಶ ದ್ವಾರ ಚಿತ್ರಿಸಿದ್ದಾರೆ. ಬ್ಯಾಟರಿ ಬಾಕ್ಸ್‌ಗೆ ಎದುರು ಬಸವಣ್ಣ ಮಂಟಪ ಒಂದೆಡೆ ಇದ್ದರೆ, ಹೇಮಕೂಟ ಪರ್ವತದ ಚಿತ್ರ ಇನ್ನೊಂದು ಕಡೆಯಿದೆ. ಟೂಲ್ ಕಿಟ್‌ನ ಮೇಲ್ಭಾಗದಲ್ಲಿ ಒಂದು ಕಡೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಗೋಪುರ, ಮತ್ತೊಂದು ಕಡೆ ಉಗ್ರನರಸಿಂಹ ಸ್ಮಾರಕ ಒಡಮೂಡಿದೆ. ಸ್ಮಾರಕಗಳ ಬಳಿ ಕುಳಿತು ಅಲ್ಲಿನ ಕಲಾಸೌಂದರ್ಯ ಕುಂಚದಲ್ಲಿ ಅರಳಿಸುವ ಕಲೆಯಿಂದ ಗಣೇಶ ಶಿಂಧೆ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ. ಅವರ ಬೈಕ್ ಜತೆ ಸೆಲ್ಫಿಗೆ ಫೋಸ್ ನೀಡಿ ಸಂಭ್ರಮಿಸುತ್ತಿದ್ದಾರೆ.

ಆರೇಳು ವರ್ಷಗಳಿಂದ ಬೈಕ್‌ನಲ್ಲಿ ಹಿಮಾಚಲಪ್ರದೇಶ, ರಾಜಸ್ತಾನ, ಕೇರಳ, ಸಿಲಿಗುರಿ, ಜಮ್ಮು- ಕಾಶ್ಮೀರ ಹಾಗೂ ಕರಾವಳಿ ಪ್ರದೇಶಗಳಿಗೆ ಬೈಕ್‌ನಲ್ಲಿ ಲಾಂಗ್ ಡ್ರೈವ್ ಹೋಗಿದ್ದೇನೆ. ಅವೆಲ್ಲಕ್ಕಿಂತ ವಿಶ್ವವಿಖ್ಯಾತ ಹಂಪಿಯ ಕಲ್ಲಿನ ಸ್ಮಾರಕಗಳು ಬಹಳ ಇಷ್ಟವಾದವು. ಆದ್ದರಿಂದ ನನ್ನ ಬೈಕ್‌ನಲ್ಲಿ ಅಕ್ರಾಲಿಕ್ ಬಣ್ಣದಿಂದ ಚಿತ್ರಗಳನ್ನು ಬಿಡಿಸಿಕೊಂಡಿದ್ದೇನೆ. ಇದು ನನಗೆ ಹೆಮ್ಮೆ ಎನಿಸುತ್ತಿದೆ.
| ಗಣೇಶ್ ಶಿಂಧೆ ಹವ್ಯಾಸಿ ಕಲಾವಿದ, ಮಹಾರಾಷ್ಟ್ರ

Leave a Reply

Your email address will not be published. Required fields are marked *