ಬಿಎಸ್‌ವೈಗೆ ಬುದ್ಧಿ ಭ್ರಮಣೆಯಾಗಿದೆ

ಹೊಸಪೇಟೆ: ಭಾರತೀಯ ಸೈನಿಕರು ಪಾಕಿಸ್ತಾನ ಉಗ್ರರ ಮೇಲೆ ದಾಳಿ ನಡೆಸಿದ್ದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ದುರಂತ. ಭಾರತೀಯ ಸೇನೆಯ ಕಾರ್ಯಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಕಸಭೆಯ 22ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ನಗರದಲ್ಲಿ ಹಂಪಿ ಉತ್ಸವ ನಿಮಿತ್ತ ಮನೆಮನೆಗೆ ತೆರಳಿ ಜನರನ್ನು ಆಹ್ವಾನಿಸುತ್ತಿದ್ದ ಸಂದರ್ಭ ವರದಿಗಾರರ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಎಂದು ಹೇಳುತ್ತಿದ್ದರು. ಈಗ, ಭಾರತೀಯ ಸೇನೆಯ ಕಾರ್ಯಾಚರಣೆಯಿಂದ ಮಿಷನ್ 22 ಎನ್ನುತ್ತಿದ್ದಾರೆ. ದೇಶದ ಎಲ್ಲರೂ ಯೋಧರ ಸೇವೆಯನ್ನು ಸ್ಮರಿಸಬೇಕೆ ವಿನಃ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ದುರಂತ. ಈ ಹಿಂದೆ ಇಂದಿರಾಗಾಂಧಿಯವರು ಬಾಂಗ್ಲಾ ಪ್ರತ್ಯೇಕತೆಗೆ ಸಹಕರಿಸಿದ್ದರು. ಅದನ್ನು ಕಾಂಗ್ರೆಸ್ ಎಂದು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಅಭ್ಯರ್ಥಿಗಳ ಗೆಲುವು, ಸೋಲನ್ನು ಜನರು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.