ಕ್ಷೇತ್ರದ ಅಭ್ಯುದಯಕ್ಕೆ ಶ್ರಮಿಸುವೆ

ಕಲ್ಲಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಹೇಳಿಕೆ

ಹೊಸಪೇಟೆ: ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಸಮೀಪದ ಶ್ರೀ ಕಣಿವೆರಾಯ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿದ ನಂತರ ವಿವಿಧ ಹಳ್ಳಿಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಅಭಿಮಾನಿಗಳೊಂದಿಗೆ ಪ್ರಚಾರ ನಡೆಸಿದರು.

ಕಲ್ಲಹಳ್ಳಿಯಲ್ಲಿ ಮಾತನಾಡಿ, ಜಿಲ್ಲೆಯ ಪಶ್ಚಿಮ ಭಾಗದವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದ್ದರಿಂದ ನಾನು ಸ್ಪರ್ಧಿಸಿದ್ದೇನೆ. ಕ್ಷೇತ್ರದಲ್ಲಿ ಈ ಹಿಂದೆ ಸಂಸದರಾಗಿದ್ದ ಶ್ರೀರಾಮುಲು, ಜೆ.ಶಾಂತಾ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅಲ್ಲದೆ, ದೇಶದ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ದೇಶದೆಲ್ಲೆಡೆ ಮೋದಿ ಹವಾ ಜೋರಾಗಿದ್ದು, ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ದೇವೇಂದ್ರಪ್ಪ ಸರಳ, ಸಜ್ಜನಿಕೆಯ ವ್ಯಕ್ತಿ. ರಾಜಕೀಯದ ಅನುಭವ ಅವರಿಗಿದೆ. ಮತದಾರರು ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ರಾಜಾಪುರ, ಕಾರಿಗನೂರು, ಪಾಪಿನಾಯಕನಹಳ್ಳಿ, ಬೈಲುವದ್ದಿಗೇರಿ, ಇಂಗಳಿಗಿ ಸೇರಿ ಇತರ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.

ಮಾಜಿ ಎಂಎಲ್ಸಿ ಮೃತ್ಯುಂಜಯ ಜಿನಗಾ, ಮುಖಂಡರಾದ ಅನಿಲ್ ನಾಯ್ಡು, ಗುದ್ಲಿ ಪರಶುರಾಮ, ಅನಂತಪದ್ಮನಾಭ, ಪತ್ತಿಕೊಂಡ ಕಿಶೋರ್, ಬಸವರಾಜ ನಾಲತ್ವಾಡ, ಚಂದ್ರಕಾಂತ ಕಾಮತ್, ಶಂಕರ್ ಮೇಟಿ, ಲಕ್ಷ್ಮಿ, ನಾಗೇನಹಳ್ಳಿ ಭಾರತಿ ಬಸವನಗೌಡ, ಮಂಜುಳಾ ವಿಶ್ವನಾಥ, ತಾರಾ, ಸುಜಾತಾ, ವಾಸಂತಿ, ಕಾಸಿಟ್ಟಿ ಉಮಾಪತಿ, ವೈ.ಯಮುನೇಶ್, ಸಂಗಪ್ಪ ಇತರರಿದ್ದರು.

ಮೋದಿ ಸಾಧನೆ ಅಪಾರ: ದೇಶದ ರಕ್ಷಣೆ ವಿಷಯದಲ್ಲಿ ಪ್ರಧಾನಿ ನರೇಂದ್ರಮೋದಿ ಸಾಕಷ್ಟು ಸಾಧನೆ ಮಾಡಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಅಲ್ಲಿನವರು ಗೌರವಿಸುವಂತಾಗಿದೆ. ಹೀಗಾಗಿ, ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಲು ರಾಜ್ಯಕ್ಕೆ 120ಕ್ಕೂ ಅಧಿಕ ಜನರು ಸ್ವಯಂ ಪ್ರೇರಣೆಯಿಂದ ಆಗಮಿಸಿದ್ದಾರೆ ಎಂದು ಮಾಜಿ ಎಂಎಲ್ಸಿ ಮೃತ್ಯುಂಜಯ ಜಿನಗಾ ಪಾಪಿನಾಯಕನಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ತಿಳಿಸಿದರು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಸಂಕಲ್ಪ ಜನರಲ್ಲಿದ್ದು, ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಆಶೀರ್ವದಿಸಬೇಕು ಎಂದು ಕೋರಿದರು.