ಬಾದಾಮಿ ಪಾದಯಾತ್ರೆಗೆ ಹಂಪಿಯಲ್ಲಿ ಅದ್ದೂರಿ ಚಾಲನೆ

ಬನಶಂಕರಿ ದೇವಿಗೆ ಹಂಪಿ ಗಾಯತ್ರಿ ಪೀಠದಿಂದ ಪೀತಾಂಬರ ಸೀರೆ ಅರ್ಪಿಸಲು ಯಾತ್ರೆ

ಹೊಸಪೇಟೆ:  ಬಾದಾಮಿಯ ಬನಶಂಕರಿ ದೇವಿಗೆ ಅರ್ಪಿಸಲು ಹೂವಿನ ಪಲ್ಲಕ್ಕಿಯಲ್ಲಿ ಪೀತಾಂಬರ ಸೀರೆಯನ್ನು ಹೊತ್ತು ಸಾಗುವ ಪಾದಯಾತ್ರೆಗೆ ಹಂಪಿ ಹೇಮಕೂಟ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು.

ಶ್ರೀ ದಯಾನಂದಪುರಿ ಸ್ವಾಮೀಜಿ ಮಾತನಾಡಿ, ಪುರಾತನ ಕಾಲದಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯ ಸ್ಥಗಿತಗೊಂಡಿದ್ದನ್ನು ಮುಂದುವರಿಸಲು ದೇವಾಂಗ ಸೇರಿ ನೇಕಾರ ಒಕ್ಕೂಟದ ಭಕ್ತರು ಆಸಕ್ತಿ ತೋರಿದ್ದರಿಂದ ಹಂಪಿ ಗಾಯತ್ರಿ ಪೀಠದಿಂದ ಬಾದಾಮಿಯ ಬನಶಂಕರಿ ದೇವಿ ಸನ್ನಿಧಾನಕ್ಕೆ ಪಾದಯತ್ರೆಯಲ್ಲಿ ತೆರಳಿ ಸೀರೆ ಅರ್ಪಿಸಲಾಗುವುದು. ಬಟ್ಟೆ ನೇಯುವ ಕಾಯಕದಲ್ಲಿ ತೊಡಗಿದ್ದ ನೇಕಾರರು ನೂಲು ಹುಣ್ಣಿಮೆಯಂದು ಶ್ರೀ ಬನಶಂಕರಿ ಅಮ್ಮನವರಿಗೆ ಇಳಕಲ್‌ನಿಂದ ಸೀರೆ ಕೊಂಡೊಯ್ದು ಅರ್ಪಿಸುತ್ತಿದ್ದ ಸಂಪ್ರಾಯದ 1904ರಿಂದ ನಡೆದುಕೊಂಡು ಬಂದಿದೆ. ಆದರೆ, ಕಾರಣಾಂತರದಿಂದ 20-25 ವರ್ಷಗಳಿಂದ ಈ ಧಾರ್ಮಿಕ ಕಾರ್ಯಕ್ರಮ ನಿಂತಿತ್ತು. ಈ ಸಂಪ್ರದಾಯವನ್ನು ಮುಂದುವರಿಸಲು ಈ ವರ್ಷ ಆರಂಭಿಸಿದ್ದು, ಮುಂದೆ ನಿರಂತರವಾಗಿ ನಡೆಯಲಿದೆ ಎಂದರು.

ನೇಕಾರ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ, ಈ ಹಿಂದೆ ಬಾದಾಮಿಯ ಬನಶಂಕರಿ ದೇವಿಗೆ ಸೀರೆ ಅರ್ಪಿಸುವ ಧಾರ್ಮಿಕ ಪದ್ಧತಿ ನೇಕಾರ ಸಮುದಾಯದಿಂದ ನಡೆದಿದೆ. ಅದು ಮುಂದುವರಿಯಬೇಕೆಂಬ ಸಮುದಾಯದ ಎಲ್ಲರ ಆಪೇಕ್ಷೆಯಂತೆ ಈ ಬಾರಿ ಸೀರೆ ಅರ್ಪಿಸುವ ಸಂಪ್ರದಾಯಕ್ಕೆ ಚಾಲನೆ ನೀಡಲಾಗಿದೆ. ಗಾಯತ್ರಿ ಪೀಠದಿಂದ ಸೀರೆಯನ್ನು ಪಾದಯಾತ್ರೆಯಲ್ಲಿ ಕೊಂಡೊಯ್ಯುವುದು ಶ್ರೇಷ್ಠಕಾರ್ಯವಾಗಿದೆ ಎಂದರು.

ದೇವಾಂಗ ಸಮುದಾಯದ ತಾಲೂಕು ಅಧ್ಯಕ್ಷ ಪರಗಿ ಶ್ರೀಶೈಲಪ್ಪ, ಗೋಸಿ ಸತೀಶ್, ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರಗಿ, ಪರಗಿ ನಾಗರಾಜ, ಅಗಳಿ ಪಂಪಾಪತಿ, ಕೊಳಗದ ಗಣಪತಿ, ಬ್ರಹ್ಮರ್ಣಣ, ಬಣ್ಣದ ಕೇಮಣ್ಣ, ಗಾಯತ್ರಿ ಪೀಠದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ಕಾಳಿಗಿ ಸುದರ್ಶನ ಹಾಗೂ ಮಹಿಳೆಯರು, ಮಕ್ಕಳು ಪಾದಯಾತ್ರೆಯಲ್ಲಿ ಇದ್ದರು.

ಆರು ದಿನ ನಡೆಯಲಿದೆ ಯಾತ್ರೆ
ಹುನುಗುಂದ ತಾಲೂಕಿನ ಸೂಳಿಬಾವಿ ಶ್ರೀ ಶಾಕಾಂಬರಿ ನೇಕಾರ ಸಹಕಾರ ಸಂಘದಲ್ಲಿ ನೇಯ್ದ ಸೀರೆಯನ್ನು ಶ್ರೀ ಬನಶಂಕರಿ ದೇವಿಗೆ ಅರ್ಪಿಸಲು ಜ.20ರಂದು ಸಂಜೆ ಪಾದಯಾತ್ರೆ ತಲುಪಲಿದೆ. ಜ.21ರಂದು ನಡೆಯುವ ಜಾತ್ರೆ ಮೊದಲ ಪೂಜೆಗೆ ಈ ಸೀರೆ ದೇವಿಗೆ ತೊಡಿಸಿ, ಪಂಚಾಮೃತಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುವುದು. ಈ ಪಾದಯಾತ್ರೆ ಜಾತ್ಯತೀತ ಭಾವನೆಯಲ್ಲಿ ನಡೆಯುತ್ತಿದೆ. ಪೀತಾಂಬರ ಸೀರೆಯನ್ನು 6ದಿನಗಳ ಕಾಲ 167 ಕಿಮೀ ದೂರದ ಬಾದಾಮಿಗೆ ಹಂಪಿ, ಕಡೇಬಾಗಿಲು, ಗಂಗಾವತಿ, ಕನಕಗಿರಿ, ತಾವರಗೇರಾ, ಇಳಕಲ್ ಸೇರಿ ವಿವಿಧ ಗ್ರಾಮಗಳ ಮೂಲಕ ಪಾದಯಾತ್ರೆ ಸಾಗಲಿದೆ. ಹೂವಿನ ಪಲ್ಲಕ್ಕಿಯನ್ನು ಸ್ವಾಗತಿಸಲು ಆಯಾ ಗ್ರಾಮಗಳಲ್ಲಿ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ.