ಸಾಮಾಜಿಕ ನ್ಯಾಯವಲ್ಲದ ಕಡ್ಡಾಯ ವರ್ಗಾವಣೆ ಪರಿಷ್ಕರಿಸಿ

ಹೊಸಪೇಟೆಯಲ್ಲಿ ಬಿಇಒ ಎಲ್.ಡಿ.ಜೋಶಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ

ಹೊಸಪೇಟೆ: ಸಾಮಾಜಿಕ ನ್ಯಾಯವಲ್ಲದ ಕಡ್ಡಾಯ ವರ್ಗಾವಣೆ ನೀತಿ ಪರಿಷ್ಕರಿಸಬೇಕೆಂದು ಆಗ್ರಹಿಸಿ ನಗರದ ಪಿಬಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಿಇಒ ಮೂಲಕ ಸಾರ್ವಜನಿಕರ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪದಾಧಿಕಾರಿಗಳು ಮತ್ತು ಶಿಕ್ಷಕರು ಮನವಿ ಸಲ್ಲಿಸಿದರು.

ಸೇವಾ ಜ್ಯೇಷ್ಠತೆ ಆಧಾರದಲ್ಲಿ ಕಡ್ಡಾಯ ವರ್ಗಾವಣೆ (ಅಶಕ್ತರನ್ನು ಹೊರತುಪಡಿಸಿ) ಇದೆ. ಆದರೆ, ಅಂಗವಿಕಲರು, ವಿಧವೆಯರು, ತೀವ್ರತರ ಕಾಯಿಲೆ ಇರುವವರು, ಅವಿವಾಹಿತರು, ಶಿಕ್ಷಕರ ಸಂಘದವರಿಗೆ ವಿನಾಯಿತಿ ನೀಡಲಾಗಿದೆ. ಜತೆಗೆ ಪತಿ, ಪತ್ನಿ ಇಬ್ಬರೂ ಶಿಕ್ಷಕರಿದ್ದವರಿಗೆ ವಿನಾಯಿತಿ ಅನ್ವಯಿಸುತ್ತಿದೆ. ಆದರೆ, ಪತಿ ಇಲ್ಲವೆ ಪತ್ನಿ ಒಬ್ಬರು ಮಾತ್ರ ಸರ್ಕಾರಿ ನೌಕರರಾಗಿದ್ದವರೆಗೆ ವರ್ಗಾವಣೆ ಕಡ್ಡಾಯಗೊಳಿಸುವುದು ಎಷ್ಟು ಸರಿ?. ಸರ್ಕಾರಿ ನೌಕರರಲ್ಲಿ ಇಂಥ ತಾರತಮ್ಯ ನೀತಿ ಜಾರಿಯಾಗುತ್ತಿರುವ ಕುರಿತು ಈಗಾಗಲೇ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಕಡ್ಡಾಯ ವರ್ಗಾವಣೆ ಎಂಬ ಕತ್ತಿಯ ಹಲಗಿನ ಮೇಲೆ ಸಿಲುಕಿರುವ ಶಿಕ್ಷಕರಿಗೂ ಪತಿ, ಪತ್ನಿ ಪ್ರಕರಣದಂತೆ ವಿನಾಯಿತಿ ನೀಡಿ. ಇಲ್ಲವಾದರೆ, ಪತಿ, ಪತ್ನಿ ಪ್ರಕರಣವನ್ನು ಕೈ ಬಿಟ್ಟು ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಸೇವಾ ಜ್ಯೇಷ್ಠತೆ ಆಧಾರದಲ್ಲಿ ಕಡ್ಡಾಯ ವರ್ಗಾವಣೆ ಮಾಡಿ. ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ನಮ್ಮ ಬೇಡಿಕೆ ಈಡೇರದಿದ್ದರೆ ಜು.25ರಂದು ಅನಿರ್ದಿಷ್ಟಾವಧಿ ನಿರಶನ ನಡೆಸಲಾಗುವುದು ಎಂದು ಒತ್ತಾಯಿಸಿದರು.

ಬಿಇಒ ಎಲ್.ಡಿ.ಜೋಷಿ, ಕ್ಷೇತ್ರ ಸಮನ್ವಯಾಧಿಕಾರಿ ಗುರುರಾಜ್ ಮನವಿ ಸ್ವೀಕರಿಸಿದರು. ಶಿಕ್ಷಕರಾದ ತಿಪ್ಪೇಸ್ವಾಮಿ, ಮಲ್ಲಯ್ಯ, ಮಂಜಪ್ಪ, ಹೊನ್ನಪ್ಪ, ಎಚ್.ವಿ.ಬಿ.ಶಿವಶಂಕರ್, ಪಿ.ಎನ್.ಲಕ್ಷ್ಮಿ, ಷಣ್ಮುಖಪ್ಪ, ಅನ್ವರ್ ಅಲಿ, ಕೋಮಲಾಬಾಯಿ, ಪ್ರಸನ್ನಕುಮಾರಿ, ಸುಭದ್ರಾ, ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಮಾಜಿ ಸದಸ್ಯ ವೆಂಕಟೇಶ ರೆಡ್ಡಿ ಇತರರಿದ್ದರು.

Leave a Reply

Your email address will not be published. Required fields are marked *