ಮೋದಿ ಮತ್ತೊಮ್ಮೆ ಪ್ರಧಾನಿಗಾಗಿ ಜಾಥಾ

ಹೊಸಪೇಟೆಯ ರಾಜಲಕ್ಷ್ಮಿ ಮಾಂಡಾ ನೇತೃತ್ವದಲ್ಲಿ 25 ಬುಲೆಟ್ ರೈಡರ್ ತಂಡದ ಪ್ರಚಾರ

ಹೊಸಪೇಟೆ (ಬಳ್ಳಾರಿ): ದೇಶ ರಕ್ಷಣೆ, ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿದ ನರೇಂದ್ರ ಮೋದಿಯವರು ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯಾಗಲು ಯುವಕರು ಸೇರಿ ಎಲ್ಲರೂ ಮತಹಾಕಲು ಮುಂದಾಗಬೇಕು. ಅಲ್ಲದೆ, ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಮಿಷನ್-2019 ಅಡಿ ಕೈಗೊಂಡಿರುವ 25 ಬುಲೆಟ್ ರೈಡರ್‌ಗಳ ತಂಡದ ನೇತೃತ್ವ ವಹಿಸಿರುವ ಹೊಸಪೇಟೆಯ ರಾಜಲಕ್ಷ್ಮಿ ಮಾಂಡಾ ತಿಳಿಸಿದರು.

ನಗರದ ಸಣ್ಣಕ್ಕಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಮಾತನಾಡಿದರು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾಗೃತಿ ಜಾಥಾ ನಡೆಸಲು ನಗರಕ್ಕೆ ಆಗಮಿಸಿದ್ದು, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಬೈಕ್ ರ‌್ಯಾಲಿಯನ್ನು ಸ್ಥಗಿತಗೊಳಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ವಿನೋಬಾಭಾವೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ನಾನು ಈಗ ಚೆನ್ನೈನಲ್ಲಿ ನೆಲೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವ ಉತ್ತಮ ಕಾರ್ಯಕ್ಕೆ ಮಾರು ಹೋಗಿ ಅವರ ಪರ ದೇಶದ ವಿವಿಧೆಡೆ ಪ್ರಚಾರ ನಡೆಸಲು ಬಂದಿರುವೆ. ವಿಶ್ವದೆಲ್ಲೆಡೆ ಭಾರತ ಮಿಂಚುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರಿಗೆ ಹೆಚ್ಚಿನ ಬಲ ತಂದು ಶತ್ರು ರಾಷ್ಟ್ರಗಳಿಗೆ ನಡುಕಹುಟ್ಟುವಂತೆ ಮಾಡಿದ್ದಾರೆ. ಅಲ್ಲದೆ, ದೇಶದ ಮಕ್ಕಳು, ಮಹಿಳೆಯರು, ರೈತರು ಸೇರಿ ಜನಸಾಮಾನ್ಯರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇವಲ 5 ವರ್ಷಗಳ ಅವಧಿಯಲ್ಲಿ ಅವರ ಸಾಧನೆ ಅದ್ವಿತೀಯವಾಗಿದ್ದು, ದೇಶದಲ್ಲಿ ಮತ್ತೊಮ್ಮೆ ಅವರು ಪ್ರಧಾನಿಯಾದರೆ ರಾಷ್ಟ್ರದ ಪ್ರಗತಿ ಇನ್ನಷ್ಟು ಸಾಧ್ಯವಿದೆ. ಹೀಗಾಗಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಸಂಕಲ್ಪದಿಂದ 2 ತಿಂಗಳ ಕಾಲ ರಾಜ್ಯದ ವಿವಿಧ ತಾಲೂಕು, ಜಿಲ್ಲೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿಶ್ವ ಹಿಂದು ಪರಿಷತ್‌ನ ವಿಜಯಲಕ್ಷ್ಮಿ ಹಿರೇಮಠ ಮಾತನಾಡಿ, ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಅವಶ್ಯವಿದೆ. ಕೇವಲ 5 ವರ್ಷಗಳ ಅವಧಿಯಲ್ಲಿ ಅವರ ಸಾಧನೆ ಅಮೋಘವಾಗಿದೆ. ಇನ್ನೊಮ್ಮೆ ಪ್ರಧಾನಿಯಾದರೆ ದೇಶದ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಜಾಗೃತಿ ಜಾಥಾವನ್ನು ಸಿದ್ಧಗಂಗಾ ಶ್ರೀಗಳ ನಿಧನದಿಂದ ಸ್ಥಗಿತಗೊಳಿಸಿ ಗೌರವ ಸೂಚಿಸಲಾಯಿತು ಎಂದು ತಿಳಿಸಿದರು.

ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್, ಬಿಜೆಪಿ ಕಾರ್ಯಕರ್ತರಾದ ಉಷಾ ಗುರುರಾಜ್, ನೀತೂ ಪಾಟೀಲ್, ಎಚ್.ಶ್ರೀನಿವಾಸರಾವ್, ಮೈಲಾರಲಿಂಗ ನಾಯಕ, ಸಂತೋಷ್, ರುದ್ರಮುನಿ, ಮಹಾವೀರ್, ವಕೀಲ ದಿನೇಶ್ ಚಂದ್ರಗೋಗಿ, ರಾಘವೇಂದ್ರ ಶೇಠ್, ಚಂದ್ರಶೇಖರ್, ಅಭಿಷೇಕ್ ಸಿಂಗ್ ಇತರರಿದ್ದರು.