ದಶರಥರಾಮೇಶ್ವರ ವಜ್ರದ ಅಭಿವೃದ್ಧಿಗೆ ಕ್ರಮ

ಹೊಸದುರ್ಗ: ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ತಾಲೂಕಿನ ದಶರಥರಾಮೇಶ್ವರ ವಜ್ರವನ್ನು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್ ತಿಳಿಸಿದರು.

ದಶರಥರಾಮೇಶ್ವರ ವಜ್ರಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಮಂಗಳವಾರ ಭೇಟಿ ನೀಡಿ ಕಾಮಗಾರಿ ಅನುಷ್ಠಾನ ಸ್ಥಳ ಪರಿಶೀಲಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಹಾದು ಹೋದ ಹಳ್ಳದ ಕಾಲುವೆಗೆ ಸೋಪಾನದ ಮೆಟ್ಟಿಲು ನಿರ್ಮಾಣ, ಚೆಕ್‌ಡ್ಯಾಂ, ಕಾಲುವೆ ಮೇಲೆ ಓಡಾಡಲು ಡಕ್ ಸ್ಲ್ಯಾಬ್ ನಿರ್ಮಿಸಲು ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ದೇವಾಲಯ ಆವರಣ, ಪುಷ್ಕರಣಿ, ಸಮುದಾಯ ಭವನ ನವೀಕರಣ, ಹೈಮಾಸ್ಟ್ ದೀಪ ಅಳವಡಿಕೆ, ವಿದ್ಯುದ್ದೀಕರಣ ಮತ್ತಿತರ ಕೆಲಸಗಳಿಗೆ 2 ಕೋಟಿ ರೂ.ಅಗತ್ಯವಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಚೆಕ್‌ಡ್ಯಾಂ ಮತ್ತಿತರ ಕಾಮಗಾರಿ ಕುರಿತು ಸ್ಥಳೀಯರು, ಅಧಿಕಾರಿಗಳ ಜತೆ ಚರ್ಚಿಸಿ ಸ್ಥಳ ಪರಿಶೀಲಿಸಿ ಯೋಜನೆ ಅಂತಿಮಗೊಳಿಸಲಾಗಿದೆ. ಅಧಿಕಾರಿಗಳು ಯಾವುದೇ ಲೋಪವಾಗದಂತೆ ಕೆಲಸ ಮಾಡುವಂತೆ ಸೂಚಿಸಿದರು.

ಜಿಪಂ ಮಾಜಿ ಸದಸ್ಯ ಡಿ.ಪರಶುರಾಮಪ್ಪ ಮಾತನಾಡಿ, ದಶರಥ ರಾಮೇಶ್ವರ ಅಭಿವೃದ್ಧಿಪಡಿಸಿದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ಆಗಲಿದೆ. ಚೆಕ್ ಡ್ಯಾಂ ನಿರ್ಮಾಣದಿಂದ ಭಕ್ತರಲ್ಲದೇ ಕಾಡು ಪ್ರಾಣಿಗಳಿಗೂ ನೆರವಾಗಲಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷರಾದ ಅನುಸೂಯಮ್ಮ, ರಾಮಪ್ಪ, ಸದಸ್ಯರಾದ ಕರಿಬಸಪ್ಪ, ರಂಗಸ್ವಾಮಿ, ಸಣ್ಣ ನೀರಾವರಿ ಇಲಾಖೆ ಎಇಇ ಚಂದ್ರಪ್ಪ, ಇಂಜಿನಿಯರ್‌ಗಳಾದ ರಾಮಚಂದ್ರನಾಯ್ಕ, ಚಂದ್ರಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *