ಹೊಸದುರ್ಗ: ಪಟ್ಟಣದಿಂದ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ಬಾಗೂರು ಹಾಗೂ ನಾಗೇನಹಳ್ಳಿ ಗೇಟ್ ನಡುವೆ ಕಿತ್ತು ಹಾಕಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ತಿಂಗಳ ಹಿಂದೆ ಕಾಮಗಾರಿ ಹೆಸರಿನಲ್ಲಿ ರಸ್ತೆ ಅಗೆದಿದ್ದು, ಈವರೆಗೆ ಪೂರ್ಣಗೊಳಿಸಿಲ್ಲ. ಇದರಿಂದ ಬಾಗೂರು, ಅನಿವಾಳ, ಕುಂದೂರು, ಬುರುಡೇಕಟ್ಟೆ, ರಂಗಯ್ಯನೂರು, ಶೆಟ್ಟಿಹಳ್ಳಿ ಸೇರಿ ಹತ್ತಕ್ಕೂ ಹೆಚ್ಚು ಗ್ರಾಮಸ್ಥರು, ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.
ರಸ್ತೆ ನಿರ್ಮಿಸುವಾಗ ಪಕ್ಕದಲ್ಲಿ ವಾಹನಗಳು ಓಡಾಡಲು ಅವಕಾಶವಿರುವಂತೆ ಕಾಮಗಾರಿ ನಡೆಸುತ್ತಾರೆ. ಆದರೆ ಇಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಣ್ಣಿನ ಗುಡ್ಡೆ ಹಾಕಲಾಗಿದೆ. ಮತ್ತೊಂದು ಬದಿಯಲ್ಲಿ ಮಣ್ಣುಹಾಕಿ ಎತ್ತರಿಸಲಾಗಿದೆ. ಮಧ್ಯದಲ್ಲಿ ಕಲ್ಲಿನ ಜಲ್ಲಿ ಹಾಕಲಾಗಿದೆ. ಸಣ್ಣಪುಟ್ಟ ವಾಹನಗಳು ತೆರಳಲು ಸಾಧ್ಯವಿಲ್ಲ. ಬಸ್ಸು ಮತ್ತಿತರ ವಾಹನಗಳು ಚಲಿಸುವಾಗ ಮಣ್ಣಿನ ಧೂಳು ಉಸಿರು ಕಟ್ಟಿಸುತ್ತದೆ.
ವಾಹನಗಳ ಚಕ್ರಕ್ಕೆ ಸಿಲುಕುವ ಜಲ್ಲಿ ಕಲ್ಲುಗಳು ಪಕ್ಕದಲ್ಲಿ ಚಲಿಸುವ ದ್ವಿಚಕ್ರವಾಹನ ಸವಾರರಿಗೆ ತಗುಲಿ ಅವಘಡ ಸಂಭವಿಸುತ್ತಿವೆ. ಇಷ್ಟಾದರೂ ಕಾಮಗಾರಿ ಉಸ್ತುವಾರಿ ವಹಿಸಿರುವ ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಸೋಮವಾರ ಬಾಗೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ವೈಕುಂಠ ಏಕಾದಶಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ರಸ್ತೆಯ ಮೂಲಕ ಪ್ರಯಾಣಿಸಿದ ಸಾವಿರಾರು ಪ್ರಯಾಣಿಕರು ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು.
ಸುಮಾರು ಒಂದೂವರೆ ಕಿಮೀ ರಸ್ತೆಯ ಉದ್ದಕ್ಕೂ ಎರಡು ಕಡೆ ಹೊಲಗಳಲ್ಲಿ ಬಿತ್ತನೆ ಮಾಡಿರುವ ಕಡಲೆ ಗಿಡಗಳ ಮೇಲೆ ಧೂಳು ಆವರಿಸಿದ್ದು, ರೈತರ ಚಿಂತೆ ಹೆಚ್ಚಿಸಿದೆ.