ಹೊಸದುರ್ಗ: ಪಟ್ಟಣದ ಐತಿಹಾಸಿಕ ಕೋಟೆ ಬನಶಂಕರಿ ದೇವಿಯ ಬನದ ಹುಣ್ಣಿಮೆ ಮಹೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬನದ ಹುಣ್ಣಿಮೆ ಪೂರ್ವಭಾವಿಯಾಗಿ ಗುರುವಾರ ದೇವಿಯ ಮೂಲ ಶಿಲಾಮೂರ್ತಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಶ್ರೀದೇವಿಯ ಕಳಸ ಪ್ರತಿಷ್ಠಾಪನೆ, ಗಣಹೋಮ, ದುರ್ಗಾಹೋಮ ಹಾಗೂ ಮಧ್ಯಾಹ್ನ ಹೋಮದ ಪೂರ್ಣಾಹುತಿ ನಡೆಯಿತು.
ಶುಕ್ರವಾರ ಮುಂಜಾನೆ ದೇವಿಯ ಮೂಲ ಶಿಲಾಮೂರ್ತಿ ಹಾಗೂ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ ನಡೆಸುವ ಮೂಲಕ ಬನದ ಹುಣ್ಣಿಮೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಅಷ್ಟೋತ್ತರ, ಮಹಾ ಮಂಗಳಾರತಿ ಬಳಿಕ ದೇವಾಲಯದ ಸುತ್ತ ಪ್ರಕಾರೋತ್ಸವ, ಪ್ರಸಾದ ವಿನಿಯೋಗ ಮತ್ತಿತರ ಕಾರ್ಯಕ್ರಮಗಳು ನಡೆದವು.
ಪ್ರಕಾರೋತ್ಸವಕ್ಕಾಗಿ ದೇವಾಲಯದಿಂದ ಹೊರಬಂದ ಅಮ್ಮನವರ ಅಲಂಕೃತ ಮೂರ್ತಿಗೆ ಬಲಿಪೂಜೆ ನೆರವೇರಿಸಿದ ನಂತರ ಮಹಾಮಂಗಳಾರತಿ, ಪಲ್ಲಕ್ಕಿ ಉತ್ಸವ ನೆರವೇರಿತು. ದೇವಾಲಯದ ಸುತ್ತಲೂ ಮಂಗಳವಾದ್ಯ ಹಾಗೂ ಬಿರುದಾವಳಿಗಳೊಂದಿಗೆ ಗಾಂಭೀರ‌್ಯದಿಂದ ಸಾಗಿದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು.
ಸಂಜೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲಕೃಂತ ಬನಶಂಕರಿ ದೇವಿ ರಾಜಬೀದಿ ಉತ್ಸವ ನಡೆಯಿತು. ಜನಪದ ಕಲಾತಂಡಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಎಲ್ಲರಿಗೂ ದೇವಾಲಯದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಿಯ ಮೂಲಮೂರ್ತಿ, ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯ ಆವರಣವನ್ನು ಹಣ್ಣು , ಹೂವು ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ನೆರೆದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.
ದೇವಾಂಗ ಸಮಾಜದ ಅಧ್ಯಕ್ಷ ಗೋವಿಂದರಾಜು, ಪುರಸಭೆ ಸದಸ್ಯರಾದ ದಾಳಿಂಬೆ ಗಿರೀಶ್, ರಾಮಚಂದ್ರಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬುರುಡೆಕಟ್ಟೆ ರಾಜೇಶ್, ಡಿ.ವಿ.ಅಂಜನ್‌ಕುಮಾರ್, ನಾಗೇಶಪ್ಪ ಮತ್ತಿತರರು ಪಾಲ್ಗೊಂಡಿದ್ದರು.