ಸಂಸ್ಕಾರವಿಲ್ಲದ ಶಿಕ್ಷಣ ಅಪಾಯ

ಹೊಸದುರ್ಗ: ಸಂಸ್ಕಾರವಿಲ್ಲದ, ಪ್ರಯೋಜನ ರಹಿತ ಶಿಕ್ಷಣದಿಂದ ರೂಪಿತವಾದ ವ್ಯಕ್ತಿತ್ವದಿಂದ ಸಮಾಜದ ಪ್ರಗತಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

ಪಟ್ಟಣದ ಶಿವಗಂಗಾ ಸಭಾಭವನದಲ್ಲಿ ಭಾನುವಾರ ಕನಕ ನೌಕರರ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಕನಕ ಪ್ರತಿಭಾ ಪುರಸ್ಕಾರ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯ ದುರ್ವತನೆ, ಕೆಟ್ಟ ನಡವಳಿಕೆಗಳು ಬದಲಾಗದಿದ್ದರೆ ಸಮಾಜ ದೊಡ್ಡ ಅಪಾಯಕ್ಕೆ ಸಿಲುಕಲಿದೆ. ಸಮಾಜದಲ್ಲಿ ಅಧಿಕಾರ, ಸ್ಥಾನಮಾನಕ್ಕಿಂತ ವ್ಯಕ್ತಿತ್ವ ದೊಡ್ಡದು ಎನ್ನುವ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳು ದೇಶದ ಪ್ರಗತಿಗೆ ಮುಖ್ಯವಾದ ಅಂಶಗಳಾಗಿವೆ. ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಕೃಷಿ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಪಕ್ಷ ಮತ್ತು ಜಾತಿ ಆಧಾರಿತ ಅಂಶಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸುತ್ತಿರುವುದು ಶಿಕ್ಷಣ ವ್ಯವಸ್ಥೆಯ ಅಧಃಪತನಕ್ಕೆ ಕಾರಣವಾಗಿದೆ. ಪ್ರೌಢಶಾಲೆಯವರೆಗೆ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಪದ್ಧತಿ ಶೈಕ್ಷಣಿಕ ವ್ಯವಸ್ಥೆಯನ್ನು ಅಣಕಿಸುವಂತಿದೆ ಎಂದು ಬೇಸರಿಸಿದರು.

ಇದರಿಂದಾಗಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಕಾಗುಣಿತ, ಅಕ್ಷರಗಳ ಪರಿಚಯ ಸರಿಯಾಗಿ ಇಲ್ಲ. ಇಂತಹ ವ್ಯವಸ್ಥೆಯಿಂದಾಗಿ ಪ್ರಸ್ತುತ ಶಿಕ್ಷಣ ಪದ್ಧತಿ ಅಂತಕದ ಸ್ಥಿತಿಗೆ ತಲುಪಿದೆ ಎಂದರು.

ಕನಕ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕ ನೌಕರರ ಸಂಘದ ಅಧ್ಯಕ್ಷ ಎಂ.ಶಶಿಧರ್, ಗೌರವಾಧ್ಯಕ್ಷ ವಜ್ರಪ್ಪ, ನಾಗೇನಹಳ್ಳಿ ಮಂಜುನಾಥ್, ಡಾ.ಎಂ.ಎಚ್.ಕೃಷ್ಣಮೂರ್ತಿ, ಆಗ್ರೋ ಶಿವಣ್ಣ, ಡಾ.ಹನುಮಂತಪ್ಪ, ಶ್ರೀಧರಮೂರ್ತಿ ಮತ್ತಿತರಿದ್ದರು.

Leave a Reply

Your email address will not be published. Required fields are marked *