More

    ಚಲನಚಿತ್ರಕ್ಕೆ ಉದ್ಯಮ ಪಟ್ಟ ನಾಡಿಗೆ ನಷ್ಟ

    ಹೊಸದುರ್ಗ: ಸಮಾಜವನ್ನು ತಿದ್ದುವ ಮಾಧ್ಯಮವಾಗಬೇಕಾಗಿದ್ದ ಚಲನಚಿತ್ರ ಕ್ಷೇತ್ರ ಉದ್ಯಮವಾಗಿ ಬದಲಾಗಿರುವುದು ದುರದೃಷ್ಟಕರ ಸಂಗತಿ ಎಂದು ಚಲನಚಿತ್ರ ನಟ ಸುಚೇಂದ್ರ ಪ್ರಸಾದ್ ವಿಷಾದಿಸಿದರು.

    ತಾಲೂಕಿನ ಸಾಣೇಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ಆಯೋಜಿಸಿರುವ ಚಲನಚಿತ್ರೋತ್ಸವಕ್ಕೆ ಭಾನುವಾರ ರಾತ್ರಿ ಚಾಲನೆ ನೀಡಿ ಮಾತನಾಡಿ, ಉದ್ಯಮ ಪಟ್ಟದಿಂದ ಸಮಾಜಮುಖಿಯತ್ತ ಚಲನಚಿತ್ರ ಕ್ಷೇತ್ರವನ್ನು ತರದಿದ್ದರೆ ನಾಡಿಗೆ ಬಹುದೊಡ್ಡ ನಷ್ಟ ಆಗಲಿದೆ ಎಂದು ಎಚ್ಚರಿಸಿದರು.

    ರಂಗಭೂಮಿಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ರಂಗಭೂಮಿಯಿಂದ ಉತ್ಪನ್ನವಾದ ಮತ್ತೊಂದು ವಿಭಾಗವೇ ಚಲನಚಿತ್ರ ಕ್ಷೇತ್ರ. ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ 80 ವರ್ಷಗಳ ಇತಿಹಾಸವಿದೆ. ಏಕಕಾಲಕ್ಕೆ ಸತ್ಪರಿಣಾಮ ಮತ್ತು ದುಷ್ಪರಿಣಾಮಗಳೆರಡನ್ನೂ ಚಲನಚಿತ್ರ ಉಂಟು ಮಾಡುತ್ತದೆ. ರಸನಿಷ್ಪತ್ತಿಯಾದಾಗಲೇ ರಸಗ್ರಹಣ ಸಾಧ್ಯ. ರಸಗ್ರಹಣಕ್ಕೆ ವಿವೇಚನೆ ಬಹಳ ಮುಖ್ಯ ಎಂದರು.

    ಚಿತ್ರವನ್ನು ಕೇವಲ ಚಿತ್ರವಾಗಿ ನೋಡುವಂಥದ್ದು ಸರಿಯಲ್ಲ. ಒಂದೇ ನೋಟಕ್ಕೆ ಸಿನಿಮಾದ ಬಹುಮುಖ ಆಯಾಮಗಳು ದಕ್ಕದೇ ಹೋಗಬಹುದು. ದಕ್ಕುವ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಸಿನಿಮಾಗಳನ್ನು ನೋಡಿದ ಪ್ರೇಕ್ಷಕ ಬೌದ್ಧಿಕವಾಗಿ ಮರುಹುಟ್ಟು ಪಡೆಯಬೇಕು. ರಸಪೂರ್ಣ, ಧ್ವನಿಪೂರ್ಣ, ಔಚಿತ್ಯಪೂರ್ಣವಾಗಿರುವ ಸಿನಿಮಾಗಳನ್ನು ಸದಭಿರುಚಿಯ ಚಿತ್ರಗಳೆನ್ನುವರು. ರುಚಿ, ಅಭಿರುಚಿಗಳು ಮನುಷ್ಯನ ಜನ್ಮವನ್ನು ಸಾರ್ಥಕವಾಗಿಸುತ್ತವೆ ಎಂದು ಹೇಳಿದರು.

    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಇಂದಿನ ಚಿತ್ರಗಳಲ್ಲಿ ಮೌಲ್ಯಗಳು ಕಾಣೆಯಾಗುತ್ತಿವೆ. ಜನರು ಬಯಸುವಂಥದ್ದನ್ನು ಕೊಡುವುದಕ್ಕಿಂತ ಸಮಾಜಕ್ಕೆ ಯಾವುದು ಉತ್ತಮ ಅದನ್ನು ನೀಡುವ ಕೊಡುವ ಚಿತ್ರಗಳು ಬೇಕು ಎಂದರು.

    ನಾಟಕ, ಚಲನಚಿತ್ರಗಳು ಬದುಕಿಗೆ ಹಿಡಿವ ಕನ್ನಡಿಗಳು. ಅವುಗಳನ್ನು ನೋಡುವ ಮೂಲಕ ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಣಕ್ಕಿಂತ ಕಾಲ ಬಹಳ ಶ್ರೇಷ್ಠ. ಹಣ ಗಳಿಸಲು ಸಾಧ್ಯವಿದೆ. ಆದರೆ, ಗತಿಸಿದ ಕಾಲವನ್ನು ಮರಳಿ ಗಳಿಸಲಾಗುವುದಿಲ್ಲ. ಕಾಲಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ನೆಮ್ಮದಿ ಬದುಕು ಸಾಧ್ಯ ಎಂದು ತಿಳಿಸಿದರು.

    ಕಾರ್ಯಕ್ರಮದ ಬಳಿಕ ಟಿ.ಎಸ್.ನಾಗಾಭರಣ ನಿರ್ದೇಶನದ ಚಿನ್ನಾರಿಮುತ್ತ ಚಲನಚಿತ್ರ ಪ್ರದರ್ಶನವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts