ಹೊಸದುರ್ಗ: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಬುಧವಾರ ಮುಂಜಾನೆ ವಿಜೃಂಭಣೆಯಿಂದ ನೆರವೇರಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ತೇರು ಎಳೆದು ಭಕ್ತಿ ಅರ್ಪಿಸಿದರು.
ಉತ್ಸವಕ್ಕೆ ಪೂರ್ವವಾಗಿ ಮಂಗಳವಾರ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯ ನಡೆದವು. ರಾತ್ರಿ ವೀರಭದ್ರಸ್ವಾಮಿ, ಆಂಜನೇಯ ಸ್ವಾಮಿ ಹಾಗೂ ಕರಿಯಮ್ಮ ದೇವ ಭೇಟಿ ಕಾರ್ಯ ನಡೆಯಿತು.
ಬುಧವಾರ ಮುಂಜಾನೆ ದೇವಾಲಯದಲ್ಲಿ ರುದ್ರಾಭಿಷೇಕ, ಅಷ್ಟೋತ್ತರ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನಂತರ ವೀರಭದ್ರ ಸ್ವಾಮಿ, ಆಂಜನೇಯ ಸ್ವಾಮಿ ಹಾಗೂ ಕರಿಯಮ್ಮ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ದೊಡ್ಡರಥದಲ್ಲಿ ಶ್ರೀ ವೀರಭದ್ರಸ್ವಾಮಿ ಹಾಗೂ ಚಿಕ್ಕರಥದಲ್ಲಿ ಆಂಜನೇಯ ಸ್ವಾಮಿಯನ್ನು ರಥಾರೋಹಣ ಮಾಡಿ ತೇರು ಎಳೆಯಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು ತೂರುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು.
ಜೋಡಿ ರಥಗಳನ್ನು ವಿವಿಧ ಹೂಗಳ ಬೃಹತ್ ಹೂಮಾಲೆಗಳು, ಬಣ್ಣ ಬಣ್ಣದ ಬಾವುಟಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಪ್ರಮುಖ ರಸ್ತೆ, ದೇವಾಲಯ ಸೇರಿ ಪ್ರಮುಖ ಸ್ಥಳಗಳನ್ನು ತಳಿರು, ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ದೊಡ್ಡೆಡೆ ಸೇವೆ ನೆರವೇರಿಸಲಾಯಿತು. ಸಂಜೆ ವೀರಭದ್ರಸ್ವಾಮಿ ಸೇರಿ ಎಲ್ಲ ದೇವರುಗಳು ಓಕುಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವು.