ಹೊಸದುರ್ಗ: ಮಕ್ಕಳಿಗೆ ಅಂಕ ಗಳಿಕೆ ಶಿಕ್ಷಣಕ್ಕಿಂತ ಸಂಸ್ಕೃತಿ, ನೈತಿಕತೆ, ಸಾಮಾಜಿಕ ಪ್ರಜ್ಞೆ ಮೂಡಿಸುವ ಶಿಕ್ಷಣದ ಅಗತ್ಯವಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಸಂಘಗಳ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಿರಿಗೆರೆಯ ಲಿಂಗೈಕ್ಯ ಶಿವಕುಮಾರ ಶ್ರೀಗಳು ಮಕ್ಕಳಿಗೆ ಔದ್ಯೋಗಿಕ, ವ್ಯಾವಹಾರಿಕ ಮತ್ತು ನೈತಿಕ ಶಿಕ್ಷಣ ಸಿಗಬೇಕೆಂದು ಪದೇ ಪದೆ ಹೇಳುತ್ತಿದ್ದರು. ಪ್ರಸ್ತುತ ಔದ್ಯೋಗಿಕ ಶಿಕ್ಷಣ ಎಲ್ಲೆಡೆ ದೊರೆಯುತ್ತಿದ್ದು, ನೈತಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆ ತುಂಬುವ ಪ್ರಯತ್ನ ಸಾಣೇಹಳ್ಳಿಯಲ್ಲಿ ನಡೆದಿದೆ ಎಂದರು.
ಸಮಾಜದಲ್ಲಿ ಧನಿಕರು ಸಾಕಷ್ಟು ಇದ್ದಾರೆ. ಆದರೆ, ಸಾಂಸ್ಕೃತಿಕ, ನೈತಿಕ, ಧಾರ್ಮಿಕ ಶ್ರೀಮಂತರ ಕೊರತೆಯಿದೆ. ಮಾಡುವ ಕೆಲಸಗಳನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಸರ್ವರ ಸಹಕಾರ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಪಾಲಕರು ಮನೆಯಲ್ಲಿ ಸಂಸ್ಕಾರ ನೀಡದಿರುವುದೇ ಮಕ್ಕಳು ದಾರಿತಪ್ಪಲು ಕಾರಣವಾಗಿದೆ. ದೊಡ್ಡ ನಗರಗಳಲ್ಲಿ ಮಕ್ಕಳನ್ನು ಓದಿಸುವ ಭ್ರಮ್ನೆ ಬಿಟ್ಟು ಗುರುಕುಲ ಶಿಕ್ಷಣ ಮಾದರಿಯ ಸಂಸ್ಥೆಗಳಲ್ಲಿ ಓದಿಸಲು ಮುಂದಾಗಬೇಕು ಎಂದರು.
ದಾವಣಗೆರೆ ಕಸಾಪ ಅಧ್ಯಕ್ಷ ಡಾ.ಮಂಜುನಾಥ ಕರ್ಕಿ, ಕೆನಡಾ ದೇಶದ ಸೋಮಶೇಖರ್, ರಾಮನಾರಾಯಣ ಸಹದೇವ್, ಎ.ಸಿ.ಚಂದ್ರಣ್ಣ, ಡಿ.ವಿ.ಗಂಗಾಧರಪ್ಪ ಮತ್ತಿತರರಿದ್ದರು.