ಹೊಸದುರ್ಗ: ಜನರು ಸಂಪತ್ತು ಎಂದು ಭ್ರಮಿಸಿ ಹೋರಾಟ ನಡೆಸುತ್ತಿರುವ ಭೂಮಿ, ಬಂಗಾರ ಹಾಗೂ ಹೆಣ್ಣಿಗಿಂತ ಜ್ಞಾನವೇ ಭೂಮಿಯ ಮೇಲಿನ ನಿಜವಾದ ಸಂಪತ್ತಾಗಿದೆ ಎಂದು ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮಂಗಳವಾರ ಮೂರನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕರೊನಾ ಅವಧಿಯಲ್ಲಾದರೂ ಈ ಸತ್ಯವನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಜ್ಞಾನ ಪಡೆಯಲು ಇರುವ ಮಾರ್ಗಗಳಲ್ಲಿ ಪ್ರಮುಖವಾಗಿ ಶಾಲಾ- ಕಾಲೇಜುಗಳಲ್ಲಿನ ಸಾಂಪ್ರದಾಯಿಕ ಶಿಕ್ಷಣ ಹಾಗೂ ಶಾಲಾ ಕಾಲೇಜಿಗೆ ಹೋಗದಿದ್ದರೂ ಪಡೆಯುವ ಅನೌಪಚಾರಿಕ ಶಿಕ್ಷಣ ಪ್ರಮುಖವಾದವು. ಇಂತಹ ಶಿಕ್ಷಣ ನೀಡುವಲ್ಲಿ ರಂಗಭೂಮಿಗೆ ಬಹುದೊಡ್ಡ ಸ್ಥಾನವಿದೆ ಎಂದರು.
ರಂಗಕರ್ಮಿ ಡಾ.ಭರತ್‌ಕುಮಾರ್ ಪೊಲಿಪು ಮಾತನಾಡಿ, ಶರಣರ ತತ್ವ ಸಾರವನ್ನು ಸಾಮಾನ್ಯರಿಗೆ ತಲುಪಿಸಲು ಪಂಡಿತಾರಾಧ್ಯ ಶ್ರೀಗಳು ಆಯ್ದುಕೊಂಡಿರುವ ರಂಗಭೂಮಿ ಶಕ್ತಿಶಾಲಿ ಮಾಧ್ಯಮವಾಗಿದೆ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ.ಜ್ಯೋತಿ, ಕೆ.ದಾಕ್ಷಾಯಿಣಿ ಮತ್ತು ಎಚ್.ಎಸ್.ನಾಗರಾಜ್ ವಚನ, ಕನ್ನಡ ಮತ್ತು ರಂಗಗೀತೆಗಳನ್ನು ಹಾಡಿದರು. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿ ಡಾ.ಅಬ್ದುಲ್ ಅಮೀದ್ ಹಿಂದಿಗೆ ಅನುವಾದಿಸಿರುವ ಮರಣ ಹೀ ಮಹಾನವಮಿ ಹಿಂದಿ ನಾಟಕವನ್ನು ಶಿವದೇಶ ಸಂಚಾರ ತಂಡದ ಕಲಾವಿದರು ಅಭಿನಯಿಸಿದರು.