ಹೊಸದುರ್ಗ: ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಬಸವ ಸಂದೇಶ ರಂಗಕಲಾವಿದರಿಗೆ ಹೆಚ್ಚು ಅನ್ವವಾಗಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿಯಲ್ಲಿ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಶುಕ್ರವಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಂಗ ಕಲಾವಿದರು ಬದುಕಿನಲ್ಲಿ ಸರಳತೆ ತೋರಿಸಿ ರಂಗದ ಮೇಲೆ ತಮ್ಮ ಪ್ರೌಢಿಮೆ ಮೆರೆಯಬೇಕು. ಆಗ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬೆಳೆಸಲು ಸಾಧ್ಯ ಎಂದರು.
ಶಿವಸಂಚಾರದ ಆರಂಭದ ವರ್ಷಗಳಲ್ಲಿ ನಮ್ಮ ಕಲಾವಿದರಿಗೆ ವಿಚಿತ್ರ ಅನುಭವಗಳಾಗಿವೆ. ಕಲಾವಿದರ ಸರಳತೆ ಮತ್ತು ಪರಸ್ಪರ ವಿಶ್ವಾಸದಿಂದ ಮಾತನಾಡುವ ರೀತಿ ಕಂಡ ಕೆಲವರು ಮಹಿಳಾ ಕಲಾವಿದರನ್ನು ಕೀಳಾಗಿ ನೋಡಿದ ನಿದರ್ಶನಗಳೂ ಇವೆ. ಇವರೇನು ನಾಟಕ ಮಾಡುತ್ತಾರೆಂದು ಮೂದಲಿಸಿದವರೂ ಇದ್ದಾರೆ. ನಾಟಕ ಮುಗಿದ ಮೇಲೆ ಪಾತ್ರ ಪರಿಚಯ ಮಾಡುವಾಗ ಆ ಕಲಾವಿದರ ಪದವಿ, ಊರು ಇತ್ಯಾದಿ ವಿವರ ತಿಳಿದಾಗ ತಮ್ಮ ವರ್ತನೆಗೆ ಪಶ್ಚಾತ್ತಾಪಪಟ್ಟು ಕಲಾವಿದರಲ್ಲಿ ಕ್ಷಮೆ ಕೇಳಿದ್ದು ಆಶ್ಚರ್ಯದ ಸಂಗತಿ ಎಂದು ಹೇಳಿದರು.
ಸಮಾಜದ ಒಳಿತು ಮತ್ತು ಕೆಡುಕುಗಳನ್ನು ತೋರಿಸಿ ಯಾವುದು ಬೇಕು, ಬೇಡ ಎನ್ನುವ ಆಯ್ಕೆಯನ್ನು ಪ್ರೇಕ್ಷಕರಿಗೆ ಬಿಡುವುದು ರಂಗಭೂಮಿಯ ಕೆಲಸ. ಹಾಗಾಗಿಯೇ ರಂಗಭೂಮಿ ಅನೌಪಚಾರಿಕ ಶಿಕ್ಷಣ ಕೇಂದ್ರ ಎನ್ನುತ್ತಾರೆ. ಅನೌಪಚಾರಿಕ ಶಿಕ್ಷಣ ಪಡೆಯಲು ವಯಸ್ಸು, ಲಿಂಗ, ಜಾತಿ, ಭಾಷೆ ಈ ಯಾವ ಭಿನ್ನತೆಯೂ ಇಲ್ಲ ಎಂದರು.
ಕಳೆದ 23 ವರ್ಷಗಳ ಶಿವಸಂಚಾರದ ಒಡನಾಟದಲ್ಲಿ ರಂಗಭೂಮಿಯ ವಿವಿಧ ಮಜಲುಗಳನ್ನು ನೋಡಿದ್ದೇವೆ. ರಂಗಭೂಮಿ ಬಯಸುವುದು ಶಿಸ್ತು, ಶ್ರದ್ಧೆ, ಹೊಂದಾಣಿಕೆ, ತಾಳ್ಮೆ, ಸತತ ದುಡಿಮೆ, ಸಂಘಟನೆ, ಸಹಕಾರ, ಸರಳತೆ ಮುಂತಾದ ಗುಣಗಳನ್ನು. ರಂಗ ತಂಡವನ್ನು ಕುಟುಂಬಕ್ಕೆ ಹೋಲಿಸಬಹುದಾದರೂ ಇಂದು ಕುಟುಂಬದ ಸ್ವರೂಪವೇ ಬದಲಾದಂತೆ ರಂಗತಂಡದ ಮನೋಭಾವಗಳೂ ಬದಲಾಗಿವೆ. ಶಿವಸಂಚಾರದ ಆರಂಭದಿಂದ ಇದುವರೆಗೂ ಕಲಾವಿದರು ಜಾತಿ, ಮತ, ವಿದ್ಯೆ, ಲಿಂಗ ಇತ್ಯಾದಿ ನೋಡದೆ ಒಂದೇ ಕುಟುಂಬದ ಸದಸ್ಯರಂತೆ ಇದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯೆ ಲಲಿತಾ ಕಪ್ಪಣ್ಣ ಮಾತನಾಡಿದರು. ಶಿವಸಂಚಾರದ ಕಲಾವಿದರಾದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್.ನಾಗರಾಜ್ ವಚನಗೀತೆ ಹಾಡಿದರು. ಅಧ್ಯಾಪಕಿ ಎಚ್.ಆರ್.ಕಾವ್ಯಾ ಸ್ವಾಗತಿಸಿದರು. ಕಾರ್ಯಕ್ರಮದ ನಂತರ ಉಷಾಹರಣ ನಾಟಕ ಪ್ರದರ್ಶನಗೊಂಡಿತು.