More

  ದೆಹಲೀಲಿ ಅನುಭವ ಮಂಟಪ ಅನಾವರಣ

  ಹೊಸದುರ್ಗ: ನವದೆಹಲಿಯ ರಾಜಪಥದಲ್ಲಿ ಭಾನುವಾರ ನಡೆಯಲಿರುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧ್ದಪಡಿಸಿರುವ ಅನುಭವ ಮಂಟಪದ ಸ್ತಬ್ಧಚಿತ್ರ ಭಾಗವಹಿಸಲಿದೆ.

  ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯ ಕಲಾವಿದರು ಅನುಭವ ಮಂಟಪದ ಶರಣ ಲೋಕವನ್ನು ಅನಾವರಣಗೊಳಿಸಿದ್ದಾರೆ.

  ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದವರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಸಿದ್ದರಾಮಪ್ಪ ಅವರ ಕಲ್ಪನೆಯಂತೆ 12ನೇ ಶತಮಾನದ ವಿಶ್ವಗುರು ಬಸವಣ್ಣ ಅವರ ಅನುಭವ ಮಂಟಪದ ಸ್ತಬ್ಧಚಿತ್ರವನ್ನು ಖ್ಯಾತ ಕಲಾ ನಿರ್ದೇಶಕ ಶಶಿಧರ ಹಡಪ ಸಿದ್ಧಗೊಳಿಸಿದ್ದಾರೆ.

  ಸ್ತಬ್ಧಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು ಶೂನ್ಯಪೀಠದ ಅಧ್ಯಕ್ಷ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಮತ್ತಿತರ ಶರಣರ ವೇಷ ಧರಿಸಿ ಅನುಭವ ಮಂಟಪವನ್ನು ಪುನರ್ ರೂಪಿಸುವ ಮೂಲಕ ಜನ ಗಮನ ಸೆಳೆಯಲಿದ್ದಾರೆ. ಸ್ತಬ್ಧಚಿತ್ರದ ಎರಡು ಬದಿಯಲ್ಲಿ ವೀರಗಾಸೆ, ಕಂಸಾಳೆ ಮತ್ತಿತರ ಜಾನಪದ ನೃತ್ಯಗಳನ್ನು ಕಲಾವಿದರು ಅಭಿನಯಿಸಲಿದ್ದಾರೆ.

  ವಿಶ್ವಗುರು ಬಸವಣ್ಣನವರ ಅವರ ಮೂರ್ತಿಯನ್ನು ವಚನ ರಚನೆ ಭಂಗಿಯಲ್ಲಿ ಸ್ತಬ್ಧಚಿತ್ರದಲ್ಲಿ ಮೂಡಿಸಲಾಗಿದೆ. ಪಕ್ಕದಲ್ಲಿರುವ ತಾಳೆಗರಿಯ ವಚನದ ಕಟ್ಟುಗಳ ಮೇಲೆ ಕನ್ನಡದಲ್ಲಿ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಎನ್ನ ದೇಹವೇ ದೇಗುಲ ಎನ್ನುವ ವಚನದ ಸಾಲುಗಳನ್ನು ಬರೆಯಲಾಗಿದೆ.

  ಅನುಭವ ಮಂಟಪದ ಪ್ರತಿಕೃತಿಯ ಮೂಲಕ ಸಾಣೇಹಳ್ಳಿಯ ರಂಗ ಶಾಲೆಯ ಕಲಾವಿದರು ಶರಣ ಪರಂಪರೆಯ ವೈಭವವನ್ನು ದೇಶಕ್ಕೆ ಪರಿಚಯಿಸುವ ಮೂಲಕ ನಾಡಿನ ಹಿರಿಮೆ ಹೆಚ್ಚಿಸಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts